ಮುಂಬೈ: ಹಿರಿಯ ನಟಿ ಶಬಾನಾ ಅಜ್ಮಿ ಅವರ 75ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಬಾಲಿವುಡ್ ನಕ್ಷತ್ರಗಳು ಒಂದೇ ವೇದಿಕೆಯಲ್ಲಿ ಕುಣಿದ ದೃಶ್ಯ ಮಿಂಚಿತು. ರೇಖಾ, ಮಾಧುರಿ ದೀಕ್ಷಿತ್ ನೇನೆ, ವಿದ್ಯಾ ಬಾಲನ್ ಹಾಗೂ ಊರ್ಮಿಳಾ ಮಾತೋಂಡ್ಕರ್ ಅವರು ‘ಪರಿಣೀತಾ’ ಚಿತ್ರದ ಜನಪ್ರಿಯ ಹಾಡು ‘ಕೈಸಿ ಪಹೇಲಿ ಜಿಂದಗನಿ’ಗೆ ಹೆಜ್ಜೆ ಹಾಕಿ ಸಮಾರಂಭಕ್ಕೆ ರಂಗು ತಂದರು.
ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ನಟ ಸಂಜಯ್ ಕಪೂರ್, ಈ ಸನ್ನಿವೇಶದ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು, “ಬಾಲಿವುಡ್‌ನ ಒಜಿ ರಾಣಿಯರು ಒಂದೇ ಹಾಡಿಗೆ ಕುಣಿದ ಅದ್ಭುತ ಕ್ಷಣ” ಎಂದು ಶೀರ್ಷಿಕೆ ಬರೆದಿದ್ದಾರೆ.
Total Diva Goals 😍#Rekha ji, #VidyaBalan, #MadhuriDixit and #UrmilaMatondkar light up #ShabanaAzmi’s birthday celebration.✨#Celebs pic.twitter.com/gwhOhkJetz
— Filmfare (@filmfare) September 18, 2025
2005ರಲ್ಲಿ ಬಿಡುಗಡೆಯಾದ ‘ಪರಿಣೀತಾ’ಯ ಈ ಹಾಡಿಗೆ ಸುನಿಧಿ ಚೌಹಾಣ್ ಕಂಠಸ್ಪರ್ಶ ನೀಡಿದ್ದಾರೆ. ಶಾಂತನು ಮೊಯಿತ್ರಾ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವು ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ 1914ರ ಅದೇ ಹೆಸರಿನ ಬಂಗಾಳಿ ಕಾದಂಬರಿಯ ಆಧಾರಿತವಾಗಿತ್ತು. ಪ್ರದೀಪ್ ಸರ್ಕಾರ್ ನಿರ್ದೇಶನದ ಈ ಚಿತ್ರವು ವಿದ್ಯಾ ಬಾಲನ್ ಅವರ ಚೊಚ್ಚಲ ಚಿತ್ರವಾಗಿದ್ದು, ಸೈಫ್ ಅಲಿ ಖಾನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.
ಶಬಾನಾ ಅಜ್ಮಿ ಇತ್ತೀಚೆಗೆ ಆರ್. ಬಾಲ್ಕಿ ನಿರ್ದೇಶನದ ‘ಘೂಮರ್’ (2023) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಸಯಾಮಿ ಖೇರ್ ಹಾಗೂ ಅಂಗದ್ ಬೇಡಿ ಸಹ ನಟಿಸಿದ್ದರು.
























































