ಚಿತ್ರದುರ್ಗ: ದಾವಣಗೆರೆ ಕಾಂಗ್ರೆಸ್ ಶಾಸಕ ಸಮರ್ಥ್ ಶಾಮನೂರು ಪ್ರಯಾಣಿಸುತ್ತಿದ್ದ ಐಷಾರಾಮಿ ಕಾರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಆರ್. ಹಳ್ಳಿ ಗೇಟ್ ಬಳಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಶಾಸಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಸಮರ್ಥ್ ಶಾಮನೂರು ಅವರು ಬೆಂಗಳೂರಿನಿಂದ ದಾವಣಗೆರೆಗೆ ತೆರಳುತ್ತಿದ್ದ ವೇಳೆ, ಸಂಡೂರು ಮೂಲದ ಸಂದೀಪ್ (45) ಎಂಬುವವರು ಚಲಾಯಿಸುತ್ತಿದ್ದ ಇನೋವಾ ಕಾರು ಕೆ.ಆರ್. ಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎನ್ನಲಾಗಿದೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಶಾಸಕ ಸಮರ್ಥ್ ಅವರ ಕಾರು ಪಲ್ಟಿಯಾದ ಕಾರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಸಂದೀಪ್ ಗಾಯಗೊಂಡಿದ್ದು, ಅವರನ್ನು ತಕ್ಷಣ ಹಿರಿಯೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಶಾಸಕ ಸಮರ್ಥ್ ಶಾಮನೂರು ಅವರಿಗೆ ಯಾವುದೇ ಗಾಯಗಳಾಗಿಲ್ಲ. ಅಪಘಾತದ ಬಳಿಕ ಅವರು ಮತ್ತೊಂದು ಕಾರಿನಲ್ಲಿ ದಾವಣಗೆರೆಗೆ ಪ್ರಯಾಣ ಮುಂದುವರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.







































































