ಬೆಂಗಳೂರು: ಖಾಸಗಿ ಶಾಲೆಗಳಿಗೆ ಸಮಾನವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಕೂಲಿ ಕೆಲಸ ಮಾಡುವವರೂ ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ತಮ್ಮ ಆದಾಯದ ಶೇ. 20ರಷ್ಟನ್ನು ಶುಲ್ಕವಾಗಿ ತುಂಬುತ್ತಿದ್ದಾರೆ. ಅವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವುದರಿಂದ ಆ ಶೇ. 20 ಹಣವನ್ನು ತಮ್ಮ ಕುಟುಂಬದ ಇತರೆ ಸಂಗತಿಗಳಿಗೆ ಬಳಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ನಾವು ಖಾಸಗಿ ಶಾಲೆಗಳಿಗೆ ಸಮಾನವಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸಮುದಾಯದ ಭಾಗಿಯಾಗುವಿಕೆ ನಿಜಕ್ಕೂ ಅತ್ಯಂತ ವೈಶಿಷ್ಟ್ಯ ಪೂರ್ಣವಾದುದು ಎಂದರು.
ರಾಜ್ಯದಲ್ಲಿ 53 ಸಾವಿರ ಸರ್ಕಾರಿ ಶಾಲೆಗಳಿದ್ದು, ಶೇ. 85ಕ್ಕಿಂತ ಹೆಚ್ಚಿನ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿರುವುದರಿಂದ ಅವುಗಳ ಅಭಿವೃದ್ಧಿಗೆ ಸಮಾಜದ ಸಕ್ರಿಯ ಭಾಗಿಯಾಗುವಿಕೆಯ ಅಗತ್ಯವಿದ್ದು, ಈ ದತ್ತು ಯೋಜನೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದ ಸಚಿವರು, ಸಮುದಾಯ ತಮ್ಮೂರಿನ ಶಾಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಬಂಟ್ವಾಳ ತಾಲೂಕಿನ ದದ್ದಲಕಾಡು ಗ್ರಾಮದ ಶಾಲೆಯನ್ನು ಅಭಿವೃದ್ಧಿಪಡಿಸಿ ಅದನ್ನು ಗ್ರಾಮಸ್ಥರು ಉಳಿಸಿಕೊಂಡಿದ್ದನ್ನು ಉದಾಹರಿಸಿದರು. ತಾವು ಇತ್ತೀಚಿಗೆ ಅಧ್ಯಯನ ಮಾಡಿದ ಇಂಗ್ಲಿಷ್‍ನ ‘ಆರ್ಡಿನರಿ ಪೀಪಲ್ ಎಕ್ಸ್ಟ್ರಾರ್ಡಿನರಿ ಟೀಚರ್ಸ್’ ಎಂಬ ಪುಸ್ತಕ ಸಾರಾಂಶಗಳನ್ನು ಮೆಲುಕು ಹಾಕಿದ ಸುರೇಶ್ ಕುಮಾರ್ ಸರ್ಕಾರಿ ಶಾಲೆಗಳು ಏಕೆ ಅಭಿವೃದ್ಧಿಯಾಗಬೇಕು ಎಂಬುದನ್ನು ಸಚಿವರು ವಿಷದಪಡಿಸಿದರು.
ಹಾಗೆಯೇ ಒಸಾಟ್ ಸಂಸ್ಥೆ ಶಾಲೆಗಳನ್ನು ಅಭಿವೃದ್ಧಿಪಡಿಸುತ್ತಿರುವುದು, ಸಿಸ್ಕೋ ಸಂಸ್ಥೆ ಪ್ರಾಜೆಕ್ಟ್ ಮತ್ತು ಗಣಿತ ವಿಷಯಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಅನುವಾಗುವಂತೆ ಮಕ್ಕಳಿಗೆ ಉಚಿತವಾಗಿ 18 ಲಕ್ಷ ಪುಸ್ತಿಕೆಗಳನ್ನು ವಿತರಿಸುತ್ತಿರುವುದನ್ನು ಉದಾಹರಿಸಿದ ಸಚಿವರು ಸಮುದಾಯವು ಶಾಲೆಗಳ ಅಭಿವೃದ್ಧಿಯಲ್ಲಿ ಭಾಗಿಯಾಗುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯೇ ಆಗಲಿದೆ ಎಂದರು.
ನಮ್ಮ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಮುಂದೆ ಐಎಎಸ್, ಐಪಿಎಸ್ ಅಧಿಕಾರಿಗಳಾಗಲಿ ಐಐಟಿಗಳಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಸೇರುವಂತಾಗಲಿ ಎಂಬ ಭಾವನೆಯಲ್ಲಿ ಇಡೀ ಸಮುದಾಯ, ಸಂಘಸಂಸ್ಥೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಬೇಕು ಎಂದರು. ಈ ನಿಟ್ಟಿನಲ್ಲಿ ಮೂಲತಃ ಶಿಕ್ಷಣ ಪ್ರೇಮಿಗಳಾದ ಸರ್ಕಾರದ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಂ.ಆರ್. ದೊರೆಸ್ವಾಮಿಯವರು ಚಿಂತನೆ ಅತ್ಯಂತ ಅಮೂಲ್ಯವಾಗಿದೆ ಎಂದವರು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಸಚಿವ ಸುರೇಶ್ ಕುಮಾರ್, ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐದು ಸರ್ಕಾರಿ ಶಾಲೆಗಳ ಅಭಿವೃದ್ಧಿಪಡಿಸುವ ದತ್ತು ಸ್ವೀಕಾರ ಪ್ರಮಾಣ ಪತ್ರ ಸ್ವೀಕರಿಸಿದರು.