ಬೆಂಗಳೂರು: ಪ್ರತಿಷ್ಠಿತ ‘ಸಾಧನಾ’ ರಾಜ್ಯ ಪ್ರಶಸ್ತಿ ಪ್ರಕಟವಾಗಿದೆ. 2022ನೇ ಸಾಲಿನ ಈ ಪ್ರತಿಷ್ಠಿತ ಪುರಸ್ಕಾರವನ್ನು ಧರ್ಮಸ್ಥಳ ಡ.|ಹೇಮಾವತಿ ವೀರೇಂದ್ರ ಹೆಗ್ಗಡೆ, ಹಿರಿಯ ಚಿತ್ರ ನಟ ದೊಡ್ಡಣ್ಣ, ಸಂಗೀತ ಸರಸ್ವತಿ ವಿಭಾ ನಾಯಕ್ ಅವರನ್ನು ಆಯ್ಕೆ ಮಾಡುವ ಮೂಲಕ ‘ಪ್ರಶಸ್ತಿ’ಯ ಹಿರಿಮೆಯನ್ಬು ಹೆಚ್ಚಿಸಿದೆ.
ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ವಾರ್ಷಿಕವಾಗಿ ಕೊಡಮಾಡುವ ಸಾಧನಾ ರಾಜ್ಯ ಪ್ರಶಸ್ತಿ ಇದಾಗಿದೆ.
ಧರ್ಮಸ್ಥಳ ಕ್ಷೇತ್ರ ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ನಾಡಿನ ಸಾವಿರಾರು ಮಹಿಳೆಯರಲ್ಲಿ ಸ್ವಾವಲಂಬನೆಯ ಬದುಕಿಗೆ ಪ್ರೇರಣೆ ನೀಡಿರುವ ಮಾತೋಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆ ಧರ್ಮಸ್ಥಳ ಅವರಿಗೆ ಧಾರ್ಮಿಕ ಮತ್ತು ಮಹಿಳಾ ಸಬಲೀಕರಣ ಪ್ರಶಸ್ತಿ ಪ್ರಕಟವಾಗಿದೆ.
ಚಲನಚಿತ್ರ ಕ್ಷೇತ್ರ:
ಕನ್ನಡ ಚಿತ್ರರಂಗದದಲ್ಲಿ 800ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪೋಷಕ ನಟನಾಗಿ ಖಳನಾಯಕನಾಗಿ ನಟಿಸಿರುವ ಹಿರಿಯ ಚಿತ್ರನಟ ಎಸ್. ದೊಡ್ಡಣ್ಣ ಅವರು ಸಾಧನಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಚುಟುಕು ಸಾಹಿತ್ಯ ಅಭಿವೃದ್ಧಿ:
ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಂಚಾಲಕ ಎಂ.ಜಿ.ಆರ್ ಅರಸ್ ಮೈಸೂರು ಅವರನ್ನು ಈ ಕ್ಷೇತ್ರದ ಸಾಧನೆಗಾಗಿ ಗುರುತಿಸಲಾಗಿದೆ.
ಬ್ಯಾಂಕಿಂಗ್ ಕ್ಷೇತ್ರ:
ಕರ್ಣಾಟಕ ಬ್ಯಾಂಕಿನ MDಮತ್ತು CEO ಎಂ *ಎಸ್ ಮಹಾಬಲೇಶ್ವರ ಭಟ್ ಅವರನ್ನು ಬ್ಯಾಂಕಿಂಗ್ ಕ್ಷೇತ್ರದ ಸಾಧನೆಗಾಗಿ ಸಾಧನಾ ಪ್ರಶಸ್ತಿ ನೀಡಲಾಗುತ್ತಿದೆ.
ಯಕ್ಷಗಾನ ಕ್ಷೇತ್ರ:
ಖ್ಯಾತ ಯಕ್ಷಗಾನ ಕಲಾವಿದ ಸೀತಾರಾಮ್ ಕಟೀಲು ಅವರು ಯಕ್ಷಗಾನ ಕ್ಷೇತ್ರದ ಸಾಧಕರಾಗಿ ಗುರುತಾಗಿದ್ದಾರೆ.
ಪತ್ರಿಕೋದ್ಯಮ ಮತ್ತು ಪ್ರಕಾಶನ ವಿಭಾಗ:
ಅನಂತ ಪ್ರಕಾಶ ಮಾಸಿಕ ಪತ್ರಿಕೆ ಸಂಪಾದಕ ಹಾಗೂ ಅನಂತ ಪ್ರಕಾಶಾನದ ಮುಖ್ಯಸ್ಥ ಕೆ. ಸಚ್ಚಿದಾನಂದ ಉಡುಪ ಅವರಿಗೆ ಸಾಧನಾ ಪ್ರಶಸ್ತಿ ಘೋಷಣೆಯಾಗಿದೆ.
ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಪಿ.ಬಿ.ಹರೀಶ್ ರೈ ಕೂಡಾ ಸಾಧನಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಯಕ್ಷಗಾನ, ಜಾನಪದ ಹಾಗೂ ಮಾಧ್ಯಮ ವಿಭಾಗ;
ಹೆಸರಾಂತ ವಾಗ್ಮಿ, ಮಾಧ್ಯಮ ಚತುರ, ಯಕ್ಷಗಾನ ಮತ್ತು ಜಾನಪದ ಕ್ಷೇತ್ರದ ಸಾಧಕ ಕದ್ರಿ ನವನೀತ್ ಶೆಟ್ಟಿ ಅವರಿಗೆ ಈ ವಿಭಾಗದ ಪ್ರಶಸ್ತಿ ಸಿಕ್ಕಿದೆ.
ರಂಗಭೂಮಿ ಮತ್ತು ಸಂಘಟನೆ ವಿಭಾಗ:
ರಂಗಭೂಮಿ ಕ್ಷೇತ್ರದ ಸಾಧಕ ಅರೆಹೊಳೆ ಸದಾಶಿವ ರಾವ್ ಅವರು ‘ಸಾಧನಾ’ ಪಟ್ಟಿಯಲ್ಲಿದ್ದಾರೆ.
ಸಾಧನಾ ರಾಜ್ಯ ಯುವ ಪ್ರಶಸ್ತಿ:
ಸಂಗೀತಾ ಕ್ಷೇತ್ರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗಾಗಿ ವಿಭಾ ಶ್ರೀನಿವಾಸ್ ನಾಯಕ್ ಇವರು ಸಾಧನಾ ರಾಜ್ಯ ಯುವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಾಧನಾ ರಾಜ್ಯ ವಿಶೇಷ ಪುರಸ್ಕಾರ:
ಅನೇಕ ಪತ್ರಿಕೆಗಳಲ್ಲಿ ದಶಕಗಳಿಂದ ಕ್ರೀಡಾ ವಾರದಿಗಾರಿಕೆ ಮತ್ತು ಅಂಕಣಕಾರರಾಗಿ ಸೇವೆ ಸಲ್ಲಿಸುತ್ತಿರುವ ಜಗದೀಶ್ಚಂದ್ರ ಸೂಟರ್ಪೇಟೆ ಅವರಿಗೆ ಸಾಧನಾ ರಾಜ್ಯ ವಿಶೇಷ ಪುರಸ್ಕಾರ ನೀಡಲಾಗುತ್ತದೆ.
ಸಾಧನಾ ರಾಜ್ಯ ಬಾಲ ಪುರಸ್ಕಾರ:
ಬಹುಮುಖ ಪ್ರತಿಭೆಯ ಕಲಾವಿದೆ ಕುಮಾರಿ ಲಾಲಿತ್ಯ ಬೇಲೂರು ಅವರನ್ನು ‘ಸಾಧನಾ ರಾಜ್ಯ ಬಾಲ ಪುರಸ್ಕಾರ’ಕ್ಕೆ ಆಯ್ಕೆ ಮಾಡಲಾಗಿದೆ.
ಸಂಘ ಸಂಸ್ಥೆಗಳಿಗೆ ಸಾಧನಾ ರಾಜ್ಯ ಪ್ರಶಸ್ತಿ:
ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಿಂದ ಜನಮೆಚ್ಚುಗೆ ಪಡೆದಿರುವ ಶ್ರೀ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ,
ತುಳು ಭಾಷೆಯ ಏಳ್ಗೆಗಾಗಿ ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿರುವ ಜೈ ತುಲುನಾಡ್ (ರಿ)
ಈ ಬಾರಿಯ ಸಾಧನಾ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕುರಿತಂತೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿರುವ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕಾ. ವೀ ಕೃಷ್ಣದಾಸ್, 2021ನೇ ಸಾಲಿನ ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರವನ್ನು ರಘು ಇಡ್ಕಿದು ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಪುರಸ್ಕಾರವು 10,000 ರೂಪಾಯಿ ನಗದು ಮತ್ತು ಚಿನ್ನದ ಪದಕವನ್ನು ಒಳಗೊಂಡಿದೆ.
2021-22ನೇ ಸಾಲಿನ ಕಥಾಯಜ್ಞ ರಾಷ್ಟ್ರೀಯ ಪುರಸ್ಕಾರವನ್ನು ಬೆಂಗಳೂರಿನ ಹಿರಿಯ ಕಥೆಗಾರ ಎ ಎನ್ ಪ್ರಸನ್ನ ಅವರಿಗೆ ನೀಡಲಾಗುವುದು. ಈ ಪುರಸ್ಕಾರವು 25,000 ರೂಪಾಯಿ ನಗದು ಮತ್ತು ಚಿನ್ನದ ಪದಕವನ್ನು ಒಳಗೊಂಡಿದೆ ಎಂದವರು ತಿಳಿಸಿದರು.
ಫೆಬ್ರವರಿ 26ರಂದು ಮಂಗಳೂರಿನ ಭಾರತರತ್ನ ಡಾ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜರುಗುವ ನಾಡು ನುಡಿ ಸಾಹಿತ್ಯ ಸಮ್ಮೇಳನದಲ್ಲಿ ಸಂಜೆ 4 ಗಂಟೆಗೆ ಈ ಸಾಧನಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದವರು ತಿಳಿಸಿದರು
ಫೆ 26: ನಾಡು ನುಡಿ ಸಮ್ಮೇಳನ
ಫೆಬ್ರವರಿ 26 ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಭಾರತರತ್ನ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಾಡು ನುಡಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಜಿ ಆರ್ ಮೆಡಿಕಲ್ ಕಾಲೇಜು ಹಾಗೂ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್ ಗಣೇಶ್ ರಾವ್ ಅವರು ಸಮ್ಮೇಳನವನ್ನು ಉದ್ಘಾಟಿಸುವರು ಹಾಗೆಯೇ ಅಖಿಲ ಭಾರತ ಕವಿಗಳು ಮತ್ತು ಲೇಖಕರ ಒಕ್ಕೂಟವನ್ನು ಉದ್ಘಾಟಿಸುವರು.
ಶ್ರೀ ಗಣೇಶ್ ರಾವ್, ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು
ಪ್ರೊ| ಭಾಸ್ಕರ್ ರೈ ಕುಕ್ಕುವಳ್ಳಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸುವರು. ಪ್ರತಿಷ್ಠಾನದ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಸ್ತಾವನೆ ಮಾಡುವರು. ಸತ್ಯವತಿ ಕೊಳಚಪ್ಪು ಅವರ ಕೃತಿಯನ್ನು ಯುಗಪುರುಷ ಪತ್ರಿಕೆ ಸಂಪಾದಕ ಕೆ.ಭುವನಾಭಿರಾಮ ಉಡುಪ ಅವರು ಲೋಕಾರ್ಪಣೆ ಗೊಳಿಸುವರು. ಕಾಂತಾರ ಖ್ಯಾತಿಯ ಕವಿ, ನ್ಯಾಯವಾದಿ ಶಶಿರಾಜ್ ಕಾವೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ತಾರಾ ಆಚಾರ್ಯ, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಂಜುನಾಥ್ ರೆವಣ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಡಾ. ವಸಂತ್ ಕುಮಾರ್ ಪೆರ್ಲ,ಪೂರ್ಣಮಾ ಸುರೇಶ್, ಪ್ರತಿಷ್ಠಾನದ ಸಂಚಾಲಕಿ ಲತಾ ಕೃಷ್ಣದಾಸ್ ಉಪಸ್ಥಿತರಿರಿರುವರು ಎಂದು ಕಾ.ವೀ. ಕೃಷ್ಣದಾಸ್ ಮಾಹಿತಿ ನೀಡಿದರು.
ಪೆರ್ಲ, ಪೂರ್ಣಿಮಾ ಅಧ್ಯಕ್ಷತೆಯಲ್ಲಿ ಕಾವ್ಯ ದಶಾವತಾರ:
ಹಿರಿಯ ಸಾಹಿತಿ, ಮಂಗಳೂರು ಆಕಾಶವಾಣಿಯ ವಿಶ್ರಾಂತ ನಿಲಯದ ನಿರ್ದೇಶಕರಾದ ಡಾ. ವಸಂತ ಕುಮಾರ್ ಪೆರ್ಲ ಹಾಗೂ ಜನಪ್ರಿಯ ಕವಯತ್ರಿ, ರಂಗ ಕಲಾವಿದೆ ಪೂರ್ಣಿಮಾ ಸುರೇಶ್ ಉಡುಪಿ ಇವರ ಜಂಟಿ ಅಧ್ಯಕ್ಷತೆಯಲ್ಲಿ ನೂರು ಮಂದಿ ಕವಿ ಕವಯತ್ರಿಯರು ಭಾಗವಹಿಸುವ ಕನ್ನಡ ಸಾಹಿತ್ಯ ಲೋಕದ ಹೊಸ ಪ್ರಯೋಗದ ವಿಶಿಷ್ಟ ಕವಿ ಸಮ್ಮಿಲನ ‘ಕಾವ್ಯ ದಶಾವತಾರ’ ನಡೆಯಲಿದೆ. ಪೂರ್ವರ್ಧದ ‘ಪ್ರೀತಿ ಪ್ರೇಮ ಸಂಗಮ’, ‘ಜೀವನಾಮೃತ’, ‘ನೋವು ನೋಯಿಸಿತು’, ‘ಮೌಢ್ಯ ಮೋಹ’ ಹಾಗೂ ‘ಆನಂದ ತೊಟ್ಟಿಲು’ ಐದು ಅವತಾರಗಳ ಅಧ್ಯಕ್ಷತೆಯನ್ನು ಡಾ ವಸಂತ ಕುಮಾರ್ ಪೆರ್ಲ ವಹಿಸುವರು. ಉತ್ತರಾರ್ಧದ ‘ದ್ವೇಷ ಪಾಶ’, ‘ಜ್ಞಾನ ಸನ್ನಿಧಿ’ ‘ಭಾಗ್ಯ ಬಂದಾಗ’ ‘ಅಮ್ಮ ದೇವರು’ ಮತ್ತು ‘ದೇವರ ತೇರು’ ಹೀಗೆ ಐದು ಅವತಾರಗಳ ಅಧ್ಯಕ್ಷತೆಯನ್ನು ಶ್ರೀಮತಿ ಪೂರ್ಣಿಮಾ ಸುರೇಶ್ ಅವರು ವಹಿಸುವರು ಎಂದರು.
ಸಂಜೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಭವನ್ನು ಕರಾವಳಿ ಕಾಲೇಜು ಸಮೂಹ ಹಾಗೂ ಜಿ ಆರ್ ಮೆಡಿಕಲ್ ಕಾಲೇಜಿನ ಸ್ಥಾಪಕಾಧ್ಯಕ್ಷ ಎಸ್ ಗಣೇಶ್ ರಾವ್ ದ್ವೀಪ ಪ್ರಜ್ವಲನ ಮಾಡಿ ಉದ್ಘಾಟಿಸುವರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶರಾದ ರಾಜೇಶ್ ಕೆ ‘ಕಾವ್ಯ ದಶಾವತಾರ’ ಸಾಂಕೇತಿಕ ಕವನ ಸಂಕಲನವನ್ನು ಬಿಡುಗಡೆಗೊಳಿಸುವರು. ಉದ್ಯಮಿ,ಸಂಘಟಕ, ದೇರೆಬೈಲ್ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಗುರುಪ್ರಸಾದ್ ಕಡಂಬಾರ್, ನಾಡಿನ ಖ್ಯಾತ ಲೆಕ್ಕ ಪರಿಶೋಧಕರಾಗಿರುವ CA ಎಸ್ ಎಸ್ ನಾಯಕ್, ಕಲ್ಕೂರ ಪ್ರತಿಷ್ಠಾನದ ಮುಖ್ಯಸ್ಥ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್ ಪ್ರದೀಪ್ ಕುಮಾರ್ ಕಲ್ಕೂರ, ಹಿರಿಯ ಸಾಹಿತಿ, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಜನಪ್ರಿಯ ಕವಿ, ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರತಿಷ್ಠಾನದ ಅಧ್ಯಕ್ಷ ಕಾ.ವೀ. ಕೃಷ್ಣದಾಸ್, ಸಂಚಾಲಕಿ ಲತಾ ಕೃಷ್ಣದಾಸ್ ಉಪಸ್ಥಿತರಿರುವರು.
ಸಾಂಸ್ಕೃತಿಕ ಕಾರ್ಯಕ್ರಮಗಳು:
ನಾಡು ನುಡಿ ಸಮ್ಮೇಳನದ ಕಾವ್ಯ ದಶಾವಾತಾರದ ಪ್ರತಿ ಅವಾತಾರದ ಆರಂಭದಲ್ಲಿ ಜಗದೀಶ್ ಶಿವಪುರ ಅವರು ಡಾ ರಾಜ್ ಕುಮಾರ್ ಧ್ವನಿಯಲ್ಲಿ ಪೂರಕ ಹಾಡುಗಳನ್ನು ಪ್ರಸ್ತುತ ಪಡಿಸುವರು. ಪ್ರತಿ ಅವತಾರದ ಅವಧಿಯಲ್ಲಿ ಖ್ಯಾತ ಚಿತ್ರ ಕಲಾವಿದ ಕೆ ಎಲ್ ಪೋಟ್ರೆಟ್ಸ್ ಇದರ ಲಕ್ಷ್ಮೀ ನಾರಾಯಣ ಅವರಿಂದ ವೈವಿಧ್ಯಮಯ ‘ಕಲಾ ವಿನೋದ’ ನಡೆಯಲಿದೆ. ಕುಮಾರಿ ಲಾಲಿತ್ಯ ಬೇಲೂರು ಅವರಿಂದ ‘ನಾಟ್ಯ ಮಯೂರಿ’ ಕಾರ್ಯಕ್ರಮ ಹಾಗೂ ಕುಮಾರಿ2 ರಿಷಿಕಾ ಕುಂದೇಶ್ವರ್ ಇವರಿಂದ ‘ಹಾಡುಹಕ್ಕಿ’ ಗಾನ ರಂಜನೆ ನಡೆಯಲಿದೆ.