ದೆಹಲಿ: ಕೃಷ್ಣಾ, ಕಾವೇರಿ, ಮಹದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ರಾಜ್ಯಕ್ಜೆ ಎದುರಾಗಿರುವ ಕಾನೂನು ಕಂಟಕ ನಿವಾರಣೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತೀವ್ರ ಕಸರತ್ತಿನಲ್ಲಿ ತೊಡಗಿದ್ದಾರೆ. ದೆಹಲಿಗೆ ತೆರಳಿರುವ ಅವರು ಕಾನೂನು ತಜ್ಞರೊಂದಿಗೆ ರೂಪಿಸುತ್ತಿರುವ ಕಾರ್ಯತಂತ್ರ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ದೆಹಲಿಯ ಕರ್ನಾಟಕ ಭವನದಲ್ಲಿ ಇಂದು ಕೃಷ್ಣ, ಕಾವೇರಿ, ಮಹದಾಯಿ ಹಾಗೂ ಅಂತರರಾಜ್ಯ ಜಲ ವಿವಾದಗಳ ಕುರಿತ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಸ್ತಾವನೆಗಳ ಬಗ್ಗೆ ಕಾನೂನು ತಜ್ಞರೊಂದಿಗೆ ಸುದೀರ್ಘ ಸಭೆ ನಡೆಯಿತು. ಹಿರಿಯ ವಕೀಲರು ಹಾಗೂ ತಾಂತ್ರಿಕ ಸಲಹೆಗಾರರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯಕ್ಕೆ ಎದುರಾಗಿರುವ ಸವಾಲು ಎದುರಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಪ್ರಯತ್ನ ನಡೆಯಿತು.
ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಸೀನಿಯರ್ ಅಡ್ವೋಕೇಟ್ ಮೋಹನ ಕಾತರಕಿ, ಅಡ್ವೋಕೇಟ್ ವಿ. ಎನ್. ರಘುಪತಿ, ನಿಶಾಂತ ಪಾಟೀಲ್, ರಾಜೇಶ್ವರ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅನೀಲ್ ಕುಮಾರ್ ಸಹಿತ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.