ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಬಹುದಿನಗಳ ಬೇಡಿಕೆಯಾದ ಬಸ್ ಘಟಕಕ್ಕೆ ಶನಿವಾರ ಚಾಲನೆ ದೊರೆಯಿತು. ಹಿರಿಯೂರು–ಧರ್ಮಸ್ಥಳ, ಚಳ್ಳಕೆರೆ, ಹೊಸದುರ್ಗ, ಹಾಸನ, ಧರ್ಮಪುರ ಮಾರ್ಗಗಳಲ್ಲಿ ನೂತನ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಯಿತು.
3 ಎಕರೆ ವಿಸ್ತೀರ್ಣದಲ್ಲಿ ರೂ.600 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಘಟಕದಲ್ಲಿ ಪ್ರಾರಂಭಿಕ ಹಂತದಲ್ಲಿ 25 ಅನುಸೂಚಿಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ.
ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಿಗೆ ಬಸ್ ಘಟಕ:
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಚಿತ್ರದುರ್ಗವನ್ನು 2018ರಲ್ಲಿ ಪ್ರತ್ಯೇಕ ವಿಭಾಗವನ್ನಾಗಿ ಘೋಷಿಸಲಾಗಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಬಸ್ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದರು. ಮೊಳಕಾಲ್ಮೂರು ಮತ್ತು ಹೊಳಲ್ಕೆರೆ ಘಟಕಗಳ ನಿರ್ಮಾಣ ಅಂತಿಮ ಹಂತದಲ್ಲಿದ್ದು, ಮುಂದಿನ ಎರಡು ತಿಂಗಳಲ್ಲಿ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.
ನಿಲ್ದಾಣ ಉನ್ನತೀಕರಣಕ್ಕೂ ಮಂಜೂರಾತಿ:
ಹಿರಿಯೂರು ಹಳೆಯ ಬಸ್ ನಿಲ್ದಾಣವನ್ನು ಉನ್ನತೀಕರಿಸಲು ಶೀಘ್ರವೇ ಮಂಜೂರಾತಿ ನೀಡಲಾಗುವುದು ಎಂದು ಸಚಿವರು ಘೋಷಿಸಿದರು. ಜೊತೆಗೆ, ಧರ್ಮಪುರದಲ್ಲಿ ರೂ.3.5 ಕೋಟಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಬೇಡಿಕೆ ಬಂದಿದ್ದು, ಅದಕ್ಕೂ ಅನುಮೋದನೆ ನೀಡುವುದಾಗಿ ತಿಳಿಸಿದರು.
ಘಟಕದ ಸೌಲಭ್ಯಗಳು:
ಹೊಸ ಘಟಕದಲ್ಲಿ ಬಸ್ಸುಗಳ ನಿರ್ವಹಣಾ ಮತ್ತು ಪರಿವೀಕ್ಷಣಾ ಅಂಕಣ, ಭದ್ರತಾ ಹಾಗೂ ಸಂಚಾರ ಶಾಖೆ, ಮಹಿಳಾ–ಪುರುಷರ ವಿಶ್ರಾಂತಿ ಗೃಹ, ಶೌಚಾಲಯ, ಇಂಧನ ಕೊಠಡಿ, ವಾಷಿಂಗ್ ರಾಂಪ್, ಪಾರ್ಕಿಂಗ್ ವ್ಯವಸ್ಥೆ, ಜನರೇಟರ್ ಕೊಠಡಿಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಸಚಿವ ಡಿ. ಸುಧಾಕರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ. ಬಿ. ಯೋಗೀಶ್ ಬಾಬು, ಜಿ.ಎಸ್. ಮಂಜುನಾಥ್ ಹಾಗೂ ಹಲವರು ಹಾಜರಿದ್ದರು.