ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡು ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.
ದಕ್ಷಿಣ ಕನ್ಬಡ ಜಿಲ್ಲೆ ಬಂಟ್ವಾಳದಲ್ಲಿ ಬಿಜೆಪಿ ಕಾರ್ಯಕರ್ತರ ವಿಶೇಷ ತಂಡ ಕೊವಿಡ್ ನಿಯಂತ್ರಣ ಹಾಗೂ ಅಸಹಾಯಕರ ಸೇವೆಯಲ್ಲಿ ತೊಡಗಿದೆ. ಈ ನಡುವೆ ಕೊವಿಡ್ ಲಸಿಕೆ ಬಗ್ಗೆ ಅನುಮಾನ ಬಗೆಹರಿಸುವ ಪ್ರಯತ್ನವೂ ಬಿಜೆಪಿ ಕಾರ್ಯಕರ್ತರಿಂದ ನಡೆದಿದೆ. ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ತಾವೇ ಮೊದಲಿಗರಾಗಿ ಲಸಿಕೆ ಪಡೆದು ಕಾರ್ಯಕರ್ತರಿಗೆ ಪ್ರೇರಣೆಯಾಗಿದ್ದಾರೆ.
ಲಸಿಕೆ ಪಡೆದ ಬಳಿಕ ತಮ್ಮ ಅಭಿಪ್ರಾಯ ಹಂಚಿಕೊಂಡ ಶಾಸಕರು, ತಾನು ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಂಡಿದ್ದು, 60 ವರ್ಷ ಮೇಲ್ಪಟ್ಟವರು ಹಾಗೂ ವಿವಿಧ ಖಾಯಿಲೆಯಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟಂತಹ ಬಂಟ್ವಾಳದ ಜನತೆಯಲ್ಲಿ ಕೋವಿಡ್ ಲಸಿಕೆ ಪಡೆಯುವಂತೆ ಮನವಿ ಮಾಡುತ್ತಿದ್ದೇನೆ. ಇದರಿಂದ ತಮಗೆ ಹಾಗೂ ಸಮಾಜಕ್ಕೆ ಒಳತಾಗುತ್ತದೆ. ಕೊರೊನಾದ 2ನೇ ಅಲೆಯ ಕುರಿತು ಜನತೆ ಆತಂಕದಲ್ಲಿದ್ದು, ಹೀಗಾಗಿ ತಮ್ಮ ಹಾಗೂ ಇತರರ ರಕ್ಷಣೆಯ ದೃಷ್ಟಿಯಿಂದ ಲಸಿಕೆ ಪಡೆಯುವುದು ಅಗತ್ಯವಾಗಿದೆ ಎಂದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ವಿತರಣೆಯಾಗುತ್ತಿದ್ದು, ಜನತೆ ಇದರ ಪ್ರಯೋಜನ ಪಡೆಯಬೇಕಿದೆ ಎಂದರು.
ಶಾಸಕರ ಜೊತೆ ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಸಹಿತ ಸ್ಥಳೀಯ ಸಂಸ್ಥೆಗಳ ಪ್ರಮುಖರು ಕೂಡ ಲಸಿಕೆ ಪಡೆದುಕೊಂಡರು.