ಬೆಂಗಳೂರು: ನಗರದಲ್ಲಿ ಪೂರ್ವ ಮುಂಗಾರು ಮಳೆ ಆರಂಭವಾಗಿದ್ದು ಅನಾಹುತ ತಡೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸನ್ನದ್ಧರಾಗಿರಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಮಳೆ ಹಾನಿ ತಡೆ ಸಂಬಂಧ ಕೆಂಗೇರಿ ವಾರ್ಡ್ ನ ಅಂಬೇಡ್ಕರ್ ಭವನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು. ಒಳಚರಂಡಿ ನೀರು ಕೆರೆ ಸೇರದಂತೆ ಕ್ರಮವಹಿಸಬೇಕು. ರಸ್ತೆ, ಕೆಳಸೇತುವೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಮಳೆ ಹಾನಿ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಪಾಯಕಾರಿ ಮರ, ವಿದ್ಯುತ್ ಕಂಬಗಳನ್ನು ಗುರುತಿಸಿ ತೆರವುಗೊಳಿಸುವ ಕಾರ್ಯವಾಗಬೇಕು. ಗಾಳಿ, ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ದಟ್ಟವಾಗಿರುವುದರಿಂದ ಯಾವುದೇ ಪ್ರಾಣ ಹಾನಿ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮಳೆಯಿಂದ ಸಮಸ್ಯೆ ಉಂಟಾಗುವ ಸ್ಥಳಗಳ ಪಟ್ಟಿ ಮಾಡಿ ಅನಾಹುತ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮಳೆ ಸಮಯದಲ್ಲಿ ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಲಿದ್ದು ಸಂಚಾರಿ ಪೊಲೀಸರು ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರಾದ ರೆಡ್ಡಿ ಶಂಕರ್ ಬಾಬು, ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತರಾದ ನಾಗರಾಜ್, ರಾಜರಾಜೇಶ್ವರಿ ನಗರ ವಲಯದ ಮುಖ್ಯ ಅಭಿಯಂತರರು ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.