ಬೆಂಗಳೂರು: ಕನ್ನಡ ಸಿನಿಮಾ ಕ್ಷೇತ್ರಕ್ಕೆ ಅಸಾಧಾರಣ ಕೊಡುಗೆ ನೀಡಿದ ಪುನೀತ್ ರಾಜ್‍ಕುಮಾರ್ ಅವರಿಗೆ “ಕರ್ನಾಟಕ ರತ್ನ” ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲು ಮುಂದಾದ ರಾಜ್ಯ ಸರಕಾರದ ನಿರ್ಧಾರವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ಶ್ಲಾಘಿಸಿದ್ದಾರೆ.
ನಗರದ ಅರಮನೆ ಮೈದಾನ ಅವರಣದಲ್ಲಿ ಇಂದು ಏರ್ಪಡಿಸಿದ್ದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ರಾಜ್ಯದ ಅತ್ಯುನ್ನತ ಪ್ರಶಸ್ತಿಯನ್ನು ಪುನೀತ್ ಅವರಿಗೆ ಕೊಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದ್ದಾರೆ. ಇದು ಅತ್ಯಂತ ಉತ್ತಮ ನಿರ್ಧಾರ ಎಂದು ನಳಿನ್‍ಕುಮಾರ್ ಕಟೀಲ್ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಬಾಲ್ಯದಲ್ಲಿಯೇ ಪ್ರತಿಭೆಯ ಚಿಲುಮೆ ಎನಿಸಿದ್ದ ಪುನೀತ್ ಅವರು, ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿದ್ದರು. ಕೇವಲ ಸಿನಿಮಾ ಕ್ಷೇತ್ರಕ್ಕೆ ತಮ್ಮನ್ನು ಸೀಮಿತಗೊಳಿಸದ ಪುನೀತ್ ಅವರು ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ನೆನಪಿಸಿದ್ದಾರೆ.