ಬೆಂಗಳೂರು: ಬೆಂಗಳೂರು ನಗರ ಬ್ಯಾಟರಾಯನಪುರ, ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಆರ್ಥಿಕ ದುರುಪಯೋಗ ಮತ್ತು ಅಸರ್ಮಪಕ ಆಡಳಿತ ನಿರ್ವಹಣೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ಸುಪದಿಗೆ ಪಡೆದಿದೆ.
ರಾಜ್ಯ ಸರ್ಕಾರದ ಈ ಆದೇಶಕ್ಕೆ ದೇವಸ್ಥಾನದ ಆಡಳಿತಮಂಡಳಿಯವರು ವಿರೋಧ ವ್ಯಕ್ತಪಡಿಸಿದರೆ, ಅಧಿಕಾರಿಗಳು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಭಕ್ತ ಸಮೂಹವೂ ದೇವಾಲಯದ ಒಳಿತಿನ ದೃಷ್ಟಿಯಿಂದ ಸರ್ಕಾರದ ಕ್ರಮವನ್ನು ಬೆಂಬಲಿಸಿದ್ದಾರೆ.
ಏನಿದು ವಿವಾದ?
ಬೆಂಗಳೂರು ನಗರ ಬ್ಯಾಟರಾಯನಪುರ, ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಆಥಿ೯ಕ ದುರುಪಯೋಗ ಮತ್ತು ಆಡಳಿತ ನಿವ೯ಹಣೆ ಅಸರ್ಮಪಕವಾಗಿ ನಡೆಯುತ್ತಿರುವುದಾಗಿ ಹಲವು ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ನಿಯಮಾನುಸಾರ ವಿಚಾರಣೆ ನಡೆಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯವರು ಸರಿಯಾದ ಮಾಹಿತಿಯನ್ನು ಒದಗಿಸುವಲ್ಲಿ ವಿಫಲರಾಗಿರುತ್ತಾರೆ. ಕಳೆದ 25 ವರ್ಷಗಳಿಂದ ಯಾವುದೇ ದಾಖಲೆ ನಿರ್ವಹಿಸಿರುವುದಿಲ್ಲ. ಆದಾಯವನ್ನೇ ತೋರಿಸದೇ ವೆಚ್ಚವನ್ನು ಮಾತ್ರ ತೋರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರದಲ್ಲಿ ಟ್ರಸ್ಟಿಗಳ ಮಧ್ಯೆ ಹೊಂದಾಣಿಕೆ ಇಲ್ಲದೆ ಗುಂಪುಗಳಾಗಿ ಮಾರ್ಪಟ್ಟಿದೆ.
ದೇವಸ್ಥಾನದ ಹುಂಡಿಯ ಹಣವನ್ನು ಲಪಾಟಯಿಸುತ್ತಿರುವ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರದಾಡಿದ್ದು, ಸರ್ಕಾರವು ಭಕ್ತರ ಹಿತ ಕಾಯುವಲ್ಲಿ ವಿಫಲವಾಗಿದೆಯೆಂಬ ಆಕ್ಷೇಪಣೆಗಳು ಸಹ ವ್ಯಕ್ತವಾಗಿದ್ದವು. ಈ ಎಲ್ಲಾ ಕಾರಣಗಳಿಂದ ದೇವಾಲಯವನ್ನು ಕನಾ೯ಟಕ ಹಿಂದೂ ಧಾಮಿ೯ಕ ಸಂಸ್ಥೆಗಳು ಮತ್ತು ಧಮಾ೯ದಾಯ ದತ್ತಿಗಳ ಅಧಿನಿಯಮ 1997ರ ಕಲಂ 42 ಮತ್ತು 43 ರನ್ವಯ ಸಕಾ೯ರದ ದಿನಾಂಕ 08/07/2025 ಆದೇಶದಲ್ಲಿ ಘೋಷಿತ ಸಂಸ್ಥೆ ಎಂದು ಘೋಷಿಸಿ ಸರ್ಕಾರದ ವಶಕ್ಕೆ ಪಡೆಯಲು ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಆದೇಶದನ್ವಯ ದಿನಾಂಕ 11.07.2025 ರಂದು ದೇವಾಲಯವನ್ನು ಇಲಾಖಾ ಅಧಿಕಾರಿಗಳು ಅರ್ಚಕರು, ಸಾವ೯ಜನಿಕರ ಸಮಕ್ಷಮ ಮಹಜರ್ ನಡೆಸಿ ಸಕಾ೯ರದ ವಶಕ್ಕೆ ಪಡೆಯಲಾಗಿದೆ. ರದ್ಧತಿಯು 5 ವರ್ಷಗಳವರೆಗೆ ತಾತ್ಕಾಲಿಕ ಪ್ರಕ್ರಿಯೆಯಾಗಿದ್ದು, ನಂತರದಲ್ಲಿ ತೀರ್ಮಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ, ರಾಜ್ಯ ಸರ್ಕಾರ ಏಕಾಏಕಿ ದೇಗುಲವನ್ನು ವಶಕ್ಕೆ ತೆಗೆದುಕೊಂಡಿರುವುದು ಸರಿಯಲ್ಲ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಮತ್ತೊಂದೆಡೆ, ಸಾರ್ವಜನಿಕರು ಕೂಡಾ ಬಗೆ ಬಗೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ದೇವಸ್ಥಾನದದಲ್ಲಿನ ಹಲವು ವಿಡಿಯೋಗಳಲ್ಲಿ ಹಣ ಕದಿಯುತ್ತಿರುವುದು ಯಾರು ಎಂದು ಗೊತ್ತಾಗಿದ್ದರೂ, ವಂಚಿಸಿರುವವರ ಮೇಲೆ ಆಡಳಿತ ಮಂಡಳಿ ಈ ವರೆಗೆ ಪೊಲೀಸ್ ಠಾಣೆಗೆ ದೂರು ದಾಖಲಿಸಿಲ್ಲ ಯಾಕೆ? ಎಂದು ಭಕ್ತರು ಪ್ರಶ್ನಿಸಿದ್ದಾರೆ.
ಯಾವುದೇ ಆಂತರಿಕ ವಿಚಾರಣಾ ಸಮಿತಿಯನ್ನು ರಚಿಸಿ ಪರಿಶೀಲಿಸಲು ಮುಂದಾಗದ ಆಡಳಿತ ಮಂಡಳಿಯ ನಡೆಯನ್ನು ಪ್ರಶ್ನಿಸಿರುವ ಸಾರ್ವಜನಿಕರು, ಅವ್ಯವಹಾರಕ್ಕೆ ಕಾರಣರಾದವರು ಪ್ರತಿಭಟನೆಗೆ ಮುಂದಾಗುವುದು ಸರಿಯಲ್ಲ ಎಂದಿದ್ದಾರೆ. ದೇವರ ದುಡ್ಡನ್ನು ನುಂಗಿ ಪ್ರತಿಭಟಿಸುವವರಿಗೆ ಪಾಪ ಪ್ರಜ್ಞೆ ಕಾಡಬಹುದು. ಭಯ, ಭಕ್ತಿ, ಭಾವನೆಗಳನ್ನೂ ಹರಾಜಿಗಿಟ್ಟವಾರ ಮೇಲಿನ ಕ್ರಮ ಸರಿಯಾಗಿದೆ ಎಂದು ಭಕ್ತರು ಪ್ರತಿಕ್ರಿಯಿಸಿದ್ದಾರೆ.