ಬೆಂಗಳೂರು: ತಮ್ಮ ಶಾಲೆ ಆವರಣದ ಆಟದ ಮೈದಾನದಲ್ಲಿರುವ ಮರಗಳನ್ನು ಕಡಿಯದಂತೆ ಆಗ್ರಹಿಸಿ ಪೀಣ್ಯ ದಾಸರಹಳ್ಳಿಯ ಅಬ್ಬಿಗೆರೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಅಪ್ಪಿಕೋ ಚಳವಳಿ ರೀತಿಯಲ್ಲಿ ಪ್ರತಿಭಟನೆ ನೆಡೆಸಿದ್ದಾರೆ.
ರಸ್ತೆಯನ್ನು ವಿಸ್ತರಣೆ ಮಾಡಲು ಮರಗಳನ್ನು ಕಡಿಯಲು ಬಿಬಿಎಂಪಿ ಏಕಾಏಕಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅಬ್ಬಿಗೆರೆ ಸರಕಾರಿ ಶಾಲಾ ಮಕ್ಕಳು ಕೈಯಲ್ಲಿ ನಾಮಫಲಕಗಳನ್ನು ಹಿಡಿದು, ಮರಗಳನ್ನು ಸುತ್ತುವರಿದು ತಬ್ಬಿಕೊಂಡು ಕಡಿಯದಂತೆ ಶಾಲಾ ಆವರಣದಲ್ಲಿ ಮನವಿ ಮಾಡುತ್ತಿದ್ದಾರೆ.
20 ವರ್ಷದ ಮರಗಳು:
ಜಿಂದಾಲ್ ಜುಬ್ಲೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಮತ್ತು ಈಗ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯೋಪಾದ್ಯಾಯರು ಮತ್ತು ಸ್ಥಳೀಯರನ್ನು ಈಟಿವಿ ಭಾರತ ಮತನಾಡಿಸಿದಾಗ ಏನಿಲ್ಲವೆಂದರೂ 15 ರಿಂದ 20 ವರ್ಷದ ಆಮ್ಲಜನಕ ಎತೇಚ್ಛವಾಗಿ ಪೂರೈಸುವ ಮರಗಳು ಇವಾಗಿದ್ದು, ಈ ಶಾಲೆ ಕೂಡ 30 ವರ್ಷ ಹಳೆಯದಾದ ಶಾಲೆಯಾಗಿದೆ. ಶಿಕ್ಷಣ ಅಥವಾ ಅರಣ್ಯ ಇಲಾಖೆಯಾಗಲಿ ಈ ಕುರಿತು ಯಾವುದೇ ಸೂಚನೆ ನೋಟಿಸ್ ನೀಡಿಲ್ಲ ಎಂದು ಹೇಳಿದರು.
ಮುಂದಿನ ಲಕ್ಷ್ಮಿಪುರಕ್ಕೆ ಹೋಗುವ ರಸ್ತೆ ಪಾರ್ಕ್ ಪಕ್ಕದಲ್ಲಿದೆ ಕಳೆದ ಒಂದು ವಾರದಿಂದ ಮರ ಕಡಿಯಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಸ್ಥಳೀಯ ಎಂ.ಎಲ್.ಎ, ಮಾಜಿ ಪಾಲಿಕೆ ಸದಸ್ಯರಿಗೆ ಮನವಿ ಸಲ್ಲಿಸಲಾಗಿದೆ ಆದರೆ ಈ ವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಪೀಣ್ಯ ದಾಸರಹಳ್ಳಿ ವಿಭಾಗದ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.