ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೂ ಮಹಿಳಾ ಆಯೋಗಕ್ಕೂ ಏನು ಸಂಬಂಧ? ಹೀಗಿರುವಾಗ ಮಹಿಳೆಯರ ಮೇಲಿನ ದೌರ್ಜನ್ಯದ ಸಂಗತಿಯನ್ನು ಮುಂದಿಟ್ಟು ಮಹಿಳಾ ಆಯೋಗದ ವಿರುದ್ದ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಪ್ರತಿಭಟನೆ ನಡೆಸಿರಿವುದು ಎಷ್ಟು ಸರಿ ಎಂಬುದು ಮಹಿಳಾ ಸಂಘಟನೆಗಳ ಆಕ್ಷೇಪ.
ಮಹಿಳೆಯರ ಪರ ಧ್ವನಿಯಾಗುವ ಕೆಲಸವನ್ನು ಮಹಿಳಾ ಆಯೋಗ ಮಾಡುತ್ತಿದೆ. ಆದರೆ ಲಾ ಆ್ಯಂಡ್ ಆರ್ಡರ್ ವಿಚಾರದಲ್ಲಿ ಜವಾಬ್ಧಾರಿ ಹೊತ್ತವರು ಪೊಲೀಸರು. ಹೀಗಿರುವಾಗ ದೌರ್ಜನ್ಯ ಪ್ರಕರಣಗಳಿಗೆ ಪೊಲೀಸ್ ಇಲಾಖೆ ಹೊಣೆಯಾಗುತ್ತದೆಯೇ ಹೊರತು ಮಹಿಳಾ ಆಯೋಗ ಅದಕ್ಕೆ ಹೊಣೆಯಾಗದು ಎಂದು ಮಹಿಳಾ ಸಂಘಟನೆಗಳ ಪ್ರಮುಖರು ಪ್ರತಿಕ್ರಿಯಿಸಿದ್ದಾರೆ. ಮಹಿಳಾ ಆಯೋಗಕ್ಕೆ ಸಲ್ಲಿಕೆಯಾಗಿರುವ ದೂರುಗಳಿಗೆ ಸಂಬಂಧಿಸಿದಂತೆ ಶೋಷಿತರಿಗೆ ನ್ಯಾಯ ಸಿಗದಿದ್ದರೆ ಹೋರಾಟ ಮಾಡಿದರೆ ನಾವೂ ಅದನ್ನು ಬೆಂಬಲಿಸುತ್ತಿದ್ದೆವು ಎಂದು ಮಹಿಳಾ ಹೋರಾಟಗಾರರು ಹೇಳಿದ್ದಾರೆ.
ಮಹಿಳಾ ಆಯೋಗದ ಅಧ್ಯಕ್ಷೆ ಕೆಂಡ:
ಇದೇ ವೇಳೆ, ರಾಜ್ಯ ಮಹಿಳಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲು ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಯತ್ನಿಸಿರುವ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಮಹಿಳಾ ಆಯೋಗವು ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು, ಸರ್ಕಾರ ಮತ್ತು ಯಾವುದೇ ರಾಜಕೀಯ ಪಕ್ಷದ ಪ್ರಭಾವ ಇಲ್ಲದೇ ಕಾರ್ಯ ನಿರ್ವಹಿಸುತ್ತಿದೆ. ರಾಜಕೀಯ ಕಾರಣಗಳಿಗಾಗಿ ಒಂದು ರಾಜಕೀಯ ಪಕ್ಷದ ಕಾರ್ಯಕರ್ತರು ರಾಜ್ಯ ಮಹಿಳಾ ಆಯೋಗದ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಹಾಗೂ ಕಚೇರಿಗೆ ನುಗ್ಗಲು ಪ್ರಯತ್ನಿಸಿ, ಆಯೋಗದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿರುವುದು ವಿಷಾಧಕರ ಸಂಗತಿ ಎಂದು ಪ್ರಮೀಳಾ ನಾಯ್ಡು ಹೇಳಿದ್ದಾರೆ.
ಈ ಕುರಿತಂತೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಆಯೋಗದ ಗಮನಕ್ಕೆ ಬಂದ ತಕ್ಷಣ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರನ್ನು ಭೇಟಿ ಮಾಡಿ, ಅವರಿಗೆ ಧೈರ್ಯ ತುಂಬುವ ಮತ್ತು ಸಾಂತ್ವಾನ ಹೇಳುವ ಕೆಲಸವನ್ನು ಆಯೋಗವು ಮೊದಲಿನಿಂದಲೂ ಮಾಡಿಕೊಂಡು ಬಂದಿರುತ್ತದೆ. ಇದರ ಜೊತೆಗೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ಮತ್ತು ನಿರ್ದೇಶನಗಳನ್ನು ನೀಡಿ, ಆಯಾ ಸಂದರ್ಭಗಳಲ್ಲಿ ನೊಂದ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸವನ್ನು ಆಯೋಗ ಮಾಡಿಕೊಂಡು ಬಂದಿರುತ್ತದೆ. ಆನೇಕ ಪ್ರಕರಣಗಳಲ್ಲಿ ಸ್ವಯಂ ಪ್ರೇರಿತವಾಗಿ ದೂರುಗಳನ್ನು ದಾಖಲಿಸಿಕೊಂಡು ಮಹಿಳೆಯರಿಗೆ ನ್ಯಾಯ ಒದಗಿಸುವ ಕೆಲಸವನ್ನು ಪ್ರಥಮ ಆಧ್ಯತೆಯ ಮೇರೆಗೆ ಮಾಡಲಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಮಹಿಳಾ ಆಯೋಗವು ಸಮಾಜದ ಕಟ್ಟಕಡೆಯ ಮಹಿಳೆಗೂ ನ್ಯಾಯವನ್ನು ದೊರಕಿಸಿ ಕೊಡಲು ಕಟಿಬದ್ಧವಾಗಿದೆ. ರಾಜಕೀಯ ಕಾರಣಗಳಿಗಾಗಿ ಮತ್ತು ಪ್ರಚಾರದ ಕಾರಣಕ್ಕಾಗಿ ರಾಜಕೀಯ ಪಕ್ಷಗಳು ರಾಜ್ಯ ಮಹಿಳಾ ಆಯೋಗದ ಮೇಲೆ ಹೆಸರು ಎರಚುವ ಕೆಲಸವನ್ನು ಮಾಡಬಾರದು. ಯಾವುದೇ ನಿರ್ಧಿಷ್ಟ ಪ್ರಕರಣಗಳಲ್ಲಿ ಮಹಿಳೆಯರಿಗೆ ಅನ್ಯಾಯವಾಗಿದ್ದಲ್ಲಿ, ಆಯೋಗದ ಗಮನಕ್ಕೆ ತಂದರೆ ಕೂಡಲೇ ಅವರಿಗೆ ನ್ಯಾಯ ಕೊಡಿಸುವ ಕಾರ್ಯವನ್ನು ಮಾಡಲಾಗುವುದು ಎಂದವರು ಭರವಸೆ ನೀಡಿದ್ದಾರೆ.
ಮಂಗಳವಾರದಂದು ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಬಲವಂತವಾಗಿ ಮಹಿಳಾ ಆಯೋಗದ ಕಾರ್ಯಾಲಯಕ್ಕೆ ನುಗ್ಗಲು ಪ್ರಯತ್ನಿಸಿದ್ದು, ಪೊಲೀಸರ ಸಕಾಲಿಕ ಪ್ರವೇಶದಿಂದ ಅವರ ಬಲವಂತದ ಕಾನೂನು ಬಾಹಿರ ಪ್ರಯತ್ನವನ್ನು ತಡೆಯಲಾಗಿದೆ. ಅಲ್ಲದೇ ಇವರು ಲಿಖಿತ ರೂಪದಲ್ಲಿ ಯಾವುದೇ ಮನವಿ ನೀಡಿಲ್ಲ. ರಾಜಕೀಯ ಪಕ್ಷದ ಪ್ರಮುಖರು ರಾಜಕೀಯ ಲಾಭಕ್ಕಾಗಿ ಮಹಿಳಾ ಆಯೋಗದ ಮೇಲೆ ಸುಳ್ಳು ಆರೋಪ ಮಾಡಬಾರದು ಎಂದು ಅವರು ಹೇಳಿದ್ದಾರೆ.