ಮಂಗಳೂರು: ತುಳುನಾಡಿನ ಏಕೈಕ ಹಾಗೂ ಮೊದಲ ತುಳು ಮಾಸಿಕ ‘ಪೂವರಿ’ ಇದೀಗ ಸಾಗರೋತ್ತರ ದೇಶಗಳಲ್ಲಿ ಮೇನಿಯಾ ಸೃಷ್ಟಿಸಿದೆ. ವಿದೇಶಗಳಲ್ಲಿ ಸಂಘ ಕಟ್ಟಿಕೊಂಡಿರುವ ತುಳುವರು (ತುಳು ಭಾಷಿಗರು) ಇದೀಗ ತಮ್ಮ ಮಾತೃ ಭಾಷೆಯ ಪತ್ರಿಕೆಗೆ ಶಕ್ತಿ ತುಂಬುವ ಪ್ರಯತ್ನಕ್ಕೆಇಳಿದಿದ್ದಾರೆ. ಅಂತಹಾ ಮಹತ್ವದ ಕೈಂಕರ್ಯಕ್ಕೆ ಅಮೆರಿಕದಲ್ಲಿರುವ ತುಳುವರು ಮುನ್ನುಡಿ ಬರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ವಿಕುಭ ಹೆಬ್ಬಾರಬೈಲು ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ ‘ಪೂವರಿ’ ಪತ್ರಿಕೆ ಇದೀಗ ದಶಮಾನೋತ್ಸವ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ಅಮೇರಿಕಾದಿಂದ ಸಂತಸದ ಸುದ್ದಿಯೊಂದು ತುಳುನಾಡಿಗೆ ಬಂದಿದೆ. ‘ಪೂವರಿ’ ತುಳು ಮಾಸಿಕದ ಜೂನ್ ತಿಂಗಳ ವಿಶೇಷ ಸಂಚಿಕೆಯು ಅಖಿಲ ಅಮೇರಿಕಾ ತುಳು ಅಂಗಣ ಯೂ.ಎಸ್.ಎ.(ಆಟ) ನೇತೃತ್ವದ ‘ಆಟ ಸಿರಿ ಪರ್ಬ- 2025’ ಸಮಾರಂಭದಲ್ಲಿ ಲೋಕಾರ್ಪಣೆಗೊಂಡು ಅಮೇರಿಕಾ ಚರಿತ್ರೆಯಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಗಿದೆ.
ವಿವಿಧ ದೇಶಗಳಲ್ಲಿ ಹರಡಿ ಕೊಂಡಿರುವ ಸುಮಾರು 2 ಕೋಟಿ ತುಳುವರ, ಸುಮಾರು 40 ಸಮುದಾಯಗಳಿಗೆ ತುಳು ಮಾತೃಭಾಷೆಯಾಗಿದೆ. ತುಳು ಭಾಷೆಯ ಏಕೈಕ ಮಾಸಿಕ ‘ಪೂವರಿ’ ಪತ್ರಿಕೆ ಉತ್ತರ ಕೆರೋಲಿನಾ ಪ್ರಾಂತ್ಯದ ರಾಲೆ ನಗರದ ಟ್ರಯಾಂಗಲ್ ತುಳುವೆರೆ ಚಾವಡಿಯ ಆತಿಥ್ಯದಲ್ಲಿ ನಡೆದ ಸಮಾರಂಭದಲ್ಲಿ ಅನಾವರಣ ಮಾಡಲಾಯಿತು. ಸಮಾರಂಭದ ಮುಖ್ಯ ಅತಿಥಿ, ತುಳುನಾಡಿನ ಅಗೋಳಿ ಮಂಜಣ್ಣ ಕುಟುಂಬ ಸದಸ್ಯೆ ತೋಕೂರುಗುತ್ತು ಡಾ. ಸಾಯಿಗೀತಾ ಮಂಗಳೂರು, ಡಾ.ರವಿ ಶೆಟ್ಟಿ ಮೂಡಂಬೈಲು ಕತಾರ್, ಶೇಖರ ನಾಯ್ಕ್ ಕನೆಕ್ಟಿಕಟ್, ಆಟ ಸ್ಥಾಪಕ ಭಾಸ್ಕರ್ ಶೇರಿಗಾರ್ ಬೋಸ್ಟನ್, ಆಟ ಅಧ್ಯಕ್ಷ ಶ್ರೀವಲ್ಲಿ ರೈ ಮಾರ್ಟೆಲ್ ಫ್ಲೋರಿಡಾ, ಆಟ ಸಿರಿ ಪರ್ಬ ಸಂಚಾಲಕಿ ರಂಜನಿ ಅಸೈಗೋಳಿ ಉತ್ತರ ಕೆರೋಲಿನಾ, ಸುದರ್ಶನ ಶೆಟ್ಟಿ ಕೆನಡಾ, ಉಮೇಶ್ ಅಸೈಗೋಳಿ, ಸುರೇಶ್ ಶೆಟ್ಟಿ, ಡಾ.ಮೋಹನಚಂದ್ರ, ಡಾ. ಬೆಳ್ಳೆ ದಿನಕರ ರೈ ನ್ಯೂಯಾರ್ಕ್, ಡಾ. ರಾಜೇಂದ್ರ ಕೆದಿಲಾಯ, ಸ್ಯಾಮ್ಯುಯೆಲ್ ಡ್ರಾಗ್ ಮೋರ್ ಇವರ ಗಣ್ಯ ಉಪಸ್ಥಿತಿಯಲ್ಲಿ ಬಿಡುಗಡೆಗೊಂಡಿತು.
ಈ ಸಮಾರಂಭದಲ್ಲಿ ಮಾತನಾಡಿದ ಗಣ್ಯರು, ಸಾಹಿತಿ ವಿಜಯಕುಮಾರ್ ಹೆಬ್ಬಾರ್ ಬೈಲ್ ಅವರು ಈ ಪತ್ರಿಕೆಯ ಮೂಲಕ ತುಳು ಪರಂಪರೆ, ತುಳು ಸಾಹಿತ್ಯ ಉಳಿಸುವಲ್ಲಿ ಮಹಾ ಯಜ್ಞವನ್ನೇ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು. ಪತ್ರಿಕೆ ನಡೆಸುವುದು ಕಷ್ಟಸಾಧ್ಯ. ಅದರಲ್ಲೂ ತುಳು ಭಾಷೆಯಲ್ಲಿನ ಬರವಣಿಗೆ ಬಲ್ಲವರ ಸಂಖ್ಯೆ ಕಡಿಮೆ ಇದ್ದಾಗ್ಯೂ ವಿಜಯಕುಮಾರ್ ಹೆಬ್ಬಾರಬೈಲು ಅವರು ಈ ಪತ್ರಿಕೆಯನ್ನು ಕಟ್ಟಿದ್ದಲ್ಲದೆ, ತುಳು ಭಾಷಾ ಸಾಹಿತ್ಯ ಬಲಗೊಳ್ಳಲು ತಮ್ಮ ಮಾಧ್ಯಮವನ್ನು ಧಾರೆ ಎರೆದಿದ್ದಾರೆ ಎಂದು ಗಣ್ಯರು ಕೊಂಡಾಡಿದ್ದಾರೆ. ಅಮೆರಿಕಾ ಮಾತ್ರವಲ್ಲ, ಇತರ ದೇಶಗಳಲ್ಲಿರುವ ತುಳು ಸಂಘಟನೆಗಳೂ ಈ ‘ಪೂವರಿ’ ಮಾಸಿಕಕ್ಕೆ ಬಲ ತಂದೊಡಬೇಕಿದೆ ಎಂಬ ಅಭಿಪ್ರಾಯ ಟ್ರಯಾಂಗಲ್ ತುಳುವೆರೆ ಚಾವಡಿಯಲ್ಲಿ ವ್ಯಕ್ತವಾಯಿತು.
ಅಮೇರಿಕಾ ಸಂಯುಕ್ತ ರಾಜ್ಯಗಳ ಸಹಿತ ಕೆನಡಾ ದೇಶದ ವಿವಿಧ ಪ್ರದೇಶಗಳ ಸುಮಾರು 18 ತುಳು ಕೂಟಗಳು ಪ್ರತಿನಿಧಿಸುವ ‘ಅಖಿಲ ಅಮೇರಿಕಾ ತುಳು ಅಂಗಣ’ದ ತುಳುವರ ಮನೆ ಮನೆ ಸೇರುವ ಮೂಲಕ ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ಈ ದಿನ ತುಳುನಾಡಿನ ತುಳು ಪತ್ರಿಕೆಯೊಂದು ವಿಶ್ವದಲ್ಲಿ ಚಾರಿತ್ರಿಕ ಇತಿಹಾಸ ಸೃಷ್ಟಿಸಿದೆ ಎಂದು ಸಾಹಿತಿಗಳು ಅಭಿಪ್ರಾಯಪಟ್ಟರು.