ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ದ ಪುಣ್ಯಕ್ಷೇತ್ರ ಪೊಳಲಿ ಇದೀಗ ‘ಷಷ್ಠಿ ಮಹೋತ್ಸವ’ದ ತಯಾರಿಯಲ್ಲಿದೆ. ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಈ ತಿಂಗಳ 28ರಂದು ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ನೆರವೇರಲಿದೆ.
ಕರಾವಳಿಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ‘ಷಷ್ಠಿ’ ಉತ್ಸವ ಅಧ್ಧೂರಿಯಾಗಿ ನೆರವೇರುತ್ತದೆ. ಅದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕುಡುಪು, ಶ್ರೀ ಕ್ಷೇತ್ರ ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಾಲಯ ಸಹಿತ ಕೆಲವು ದೇವಾಲಯಗಳೂ ಷಷ್ಠಿ ಸಂಭ್ರಮಕ್ಕೆ ಸಾಕ್ಷಿಯಾಗುತ್ತವೆ. ಅದೇ ಉತ್ಸವವು ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಮಹಾ ವೈಭವದಿಂದ ನೆರವೇರುತ್ತದೆ.
ಈ ಬಾರಿಯ ಷಷ್ಠಿ ಮಹೋತ್ಸವ ಈ ತಿಂಗಳ 28ರಂದು ನೆರವೇರಲಿದ್ದು, ಅದಕ್ಕಾಗಿ ಪೊಳಲಿ ದೇವಾಲಯ ಸಿದ್ದವಾಗುತ್ತಿದೆ. ದೇಗುಲದ ಸಿಬ್ಬಂದಿಯಷ್ಟೇ ಅಲ್ಲ, ಸಿಬ್ಬಂದಿಯ ಕುಟುಂಬ ಸಮೂಹ, ಭಕ್ತ ವರ್ಗ ಈ ಸಿದ್ದತಾ ಕೈಂಕರ್ಯದಲ್ಲಿ ಕೈಜೋಡಿಸಿದೆ.
ಜಾತ್ರೆಯ ‘ಚೆಂಡು’; ಷಷ್ಠಿಯ ‘ರಥ’
ರಾಜರಿಗೂ ‘ರಾಜೆ’ ಎಂಬ ಸ್ಥಾನದಲ್ಲಿರುವ ರಾಜರಾಜೇಶ್ವರಿ ದೇವಿ ನೆಲೆಯೂರಿರುವ ಈ ಕ್ಷೇತ್ರ ಇಡೀ ದೇಶದಲ್ಲೇ ಅನನ್ಯ ವೈಶಿಷ್ಟ್ಯ ಹೊಂದಿದೆ. ಈ ಸೊಬಗಿನ ಕ್ಷೇತ್ರದ ಇತಿಹಾಸವೂ ಸೊಗಸಾಗಿದೆ. ನಾಡನ್ನು ಆಳುತ್ತಿದ್ದ ಅರಸನು ತನ್ನ ಕಿರೀಟವನ್ನೇ ದೇವಿ ವಿಗ್ರಹಕ್ಕೆ ತೊಡಿಸಿದ್ದು ಅ ಕಿರೀಟವೇ ಭಕ್ತರ ಪಾಲಿಗೆ ಆಕರ್ಷಣೆಯ ಕೇಂದ್ರಬಿಂದು. ಶತಮಾನಗಳ ಹಿಂದೆ ವಿಗ್ರಹಕ್ಕೆ ತೊಡಿಸಲಾದ ವಜ್ರಕಿರೀಟವನ್ನು ಈವರೆಗೆ ತೆಗೆದ ಇತಿಹಾಸವೇ ಇಲ್ಲ. ಅಷ್ಟೇ ಅಲ್ಲ, ಪುರಾಣ ಕಥೆಯಂತೆ ದುರ್ಗೆಯು ರಾಕ್ಷಸರನ್ನು ವಧೆ ಮಾಡಿ, ರುಂಡ ಚೆಂಡಾಡಿದ್ದ ರೀತಿಯಲ್ಲೇ ಈಗಿನ್ನೂ ಜಾತ್ರೆ ಸಂದರ್ಭದಲ್ಲಿ ಚೆಂಡು ಉತ್ಸವ ನಡೆಯುತ್ತದೆ. ಈ ಉತ್ಸವ ಅನಾದಿಕಾಲದಿಂದಲೂ ನೆರವೇರುತ್ತಾ ಬಂದಿದ್ದು, ಯಾವುದೇ ಸಂದರ್ಭದಲ್ಲಿ ಅದು ನಿಂತಿಲ್ಲ. ಚೆಂಡು ಉತ್ಸವ ಸಂದರ್ಭದಲ್ಲಿ ನೆರವೇರುವ ಆಕರ್ಷಕ ‘ಬಲಿ’ ಸನ್ನಿವೇಶವು ಷಷ್ಠಿ ಸಂದರ್ಭದಲ್ಲೂ ಸಾಕ್ಷಿಯಾಗುತ್ತದೆ. ಷಷ್ಠಿ ಸಂದರ್ಭದ ರಥೋತ್ಸವ ಕೂಡಾ ಇಲ್ಲಿಯದ್ದೇ ಆದ, ಈ ಉತ್ಸವದ್ದೇ ಆದ ಆಕರ್ಷಣೆ.

ಈ ಷಷ್ಠಿ ಮಹೋತ್ಸವ ಕಾಲದಲ್ಲಿ ವಿಶೇಷ ಹರಕೆ ತೀರಿಸಿದರೆ ಕಷ್ಟ-ಸಂಕಷ್ಟಗಳು ದೂರವಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ. ಅದರಂತೆ ಹರಕೆಯ ಕೈಂಕರ್ಯದಲ್ಲೂ ಅನೇಕರು ಭಾಗಿಯಾಗುತ್ತಾರೆ. ಈ ನಡುವೆ, ಷಷ್ಠಿ ಉತ್ಸವದ ಮುನ್ನಾ ದಿನದಂದು ‘ಸ್ಕಂದ ಪಂಚಮಿ’ ಉತ್ಸವವೂ ನೆರವೇರಲಿದೆ ಎಂದು ದೇವಾಲಯದ ಪ್ರಮುಖರು ತಿಳಿಸಿದ್ದಾರೆ.



























































