ದೊಡ್ಡಬಳ್ಳಾಪುರ: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಹಾಗೂ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಫೆ.22ರಂದು ದೊಡ್ಡಬಳ್ಳಾಪುರ ನಗರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಯಲಿದೆ ಎಂದು ಕಾಂಗ್ರೆಸ್ ಮುಖಂಡ ಜಿ.ಲಕ್ಷ್ಮೀಪತಿ ಹೇಳಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿದೆ. ತೈಲ ಬೆಲೆಗಳ ಏರಿಕೆಯಿಂದ ಹಲವು ಉದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅಡುಗೆ ಅನಿಲದ ಸಿಲಿಂಡರ್ ಮೇಲಿನ ಸಬ್ಸಿಡಿ ರದ್ದುಗೊಳಿಸಿರುವುದರಿಂದ ಜನ ಸಾಮಾನ್ಯರ ಬದುಕು ದುಸ್ತರವಾಗಿದೆ. ಪ್ರತಿದಿನ ತೈಲಬೆಲೆ ಏರುತ್ತಲೇ ಇದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು ಕೈಗಾರಿಕೆಗಳು ಬಾಗಿಲು ಮುಚ್ಚುವ ಸ್ಥಿತಿ ತಲುಪುತ್ತಿದೆ ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಪೆಟ್ರೋಲ್ ಬೆಲೆ ₹60 ತಲುಪಿದ್ದಕ್ಕೆ ಹಿರಿಯ ಚಿತ್ರನಟರು ಸೇರಿದಂತೆ ಹಲವಾರು ಜನ ಬಾಲಿವುಡ್ ನಟ, ನಟಿಯರು ಸರ್ಕಾರವನ್ನು ಟೀಕಿಸಿ ಪತ್ರಿಕಾ ಹೇಳಿಕೆಗಳನ್ನು ನೀಡಿದ್ದರು. ಆದರೆ, ಪೆಟ್ರೋಲ್ ಬೆಲೆ ₹100 ಗಡಿ ತಲುಪುತ್ತಿದ್ದರೂ ಸಹ ಯಾರೊಬ್ಬ ನಟರು ಕೂಡ ಬಾಯಿ ಬಿಡುತ್ತಿಲ್ಲ ಎಂದು ಅವರು ಟೀಕಿಸಿದರು.
ನಗರದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಶಾಸಕ ಕೃಷ್ಣಬೈರೇಗೌಡ, ಟಿ.ವೆಂಕಟರಮಣಯ್ಯ, ಬೈರತಿ ಸುರೇಶ್, ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಪುಷ್ಪಅಮರನಾಥ್ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.