ಬೆಂಗಳೂರು: ಪೆಟ್ರೋಲ್-ಡೀಸೆಲ್ ದರ ಏರಿಕೆಯ ರಾಜ್ಯ ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ‘ಗ್ಯಾರೆಂಟಿ’ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗಿದ್ದು ಹಣ ಹೊಂದಿಸಿಕೊಳ್ಳಲು ಇದೀಗ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಎಳೆಯಲಾಗಿದೆ ಎಂದು ಸಾರ್ವಜನಿಕರು ಸಿಟ್ಟು ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾರ್ವಜನಿಕರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ಒಂದಿಷ್ಟು ಜನರಿಗೆ ಉಚಿತದ ಕಡುಗೆ ನೀಡಲು ಬಹುಪಾಲು ಜನರ ಜೇಬಿಗೆ ಕತ್ತರಿ ಹಾಕುವುದು ಸರಿಯಲ್ಲ ಎಂದು ದೂರಿದ್ದಾರೆ.
ಸರ್ಕಾರದ ಈ ಕ್ರಮದ ಬಗ್ಗೆ ಯುವಜನರೇ ಹೆಚ್ಚಾಗಿ ಸಿಡಿದೆದ್ದಂತಿದೆ. ಸ್ವಂತ ವಾಹನಗಳಲ್ಲಿ ತೆರಳುವ ಉದ್ಯೋಗಿಗಳ ಪಾಲಿಗೆ ಸಿದ್ದರಾಮಯ್ಯ ಸರ್ಕಾರ ಮರಣ ಶಾಸನ ಬರೆಯುತ್ತಿದೆ ಎಂದು ಖಾಸಗಿ ಸಂಸ್ಥೆಗಳ ನೌಕರರು ನೋವು ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಕೈಗಾರಿಕಾ ವಲಯದಲ್ಲೂ ಆಕ್ರೋಶ ಸ್ಫೋಟಗೊಂಡಿದೆ. ಪೆಟ್ರೋಲ್-ಡೀಸೆಲ್ ದರ ಏರಿಕೆಯ ಪರಿಣಾಮವಾಗಿ ಎಲ್ಲಾ ಉತ್ಪನ್ನಗಳ ಬೆಲೆಯೂ ಏರಿಕೆಯಾಗಲಿದೆ. ಇದರಿಂದ ಇಡೀ ಮಾರುಕಟ್ಟೆ ವ್ಯವಸ್ಥೆಯೇ ಏರುಪೇರಾಗಲಿದೆ ಎಂದು ಕೈಗಾರಿಕೋದ್ಯಮಿಗಳು ವಿಶ್ಲೇಷಿಸಿದ್ದಾರೆ.





































































