ಬೆಂಗಳೂರು: ಕೊಲೆ ಆರೋಪಕ್ಕೆ ಗುರಿಯಾಗಿ ನಟ ದರ್ಶನ್ ಬಂಧನವಾಗಿದ್ದು, ಇನ್ನೊಂದೆಡೆ ದರ್ಶನ್ ಅಭಿಮಾನಿ ಎಂದು ಫೋಸ್ ನೀಡಿ ಯುವಕರ ಗುಂಪು ಮಾಧ್ಯಮದವರ ಮೇಲೆ ದಾಳಿ ಮಾಡಿ ಕ್ರೌರ್ಯ ಮೆರೆದಿದೆ. ಬೆಂಗಳೂರಿನ ಎಸಿಎಂಎಂ ಕೋರ್ಟ್ ಸಂಕೀರ್ಣದಲ್ಲಿ ಈ ಘಟನೆ ನಡೆದಿದೆ.
ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಗ್ಯಾಂಗನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದ ಸುದ್ದಿಗಾಗಿ ತೆರಳಿದ್ದ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ನ ವರದಿಗಾರ ಟಿ.ಟಿ.ರಕ್ಷಿತ್ ಗೌಡ ಅವರ ಮೇಲೆ ನಾಲ್ವರು ಅಪರಿಚಿತ ವ್ಯಕ್ತಿಗಳ ತಂಡ ಹಲ್ಲೆ ಮಾಡಿದೆ.
ನೃಪತುಂಗ ರಸ್ತೆಯಲ್ಲಿರುವ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದರ್ಶನ್ ಅವರನ್ನು ಹಾಜರುಪಡಿಸಬೇಕಿತ್ತು. ಈ ಸಂದರ್ಭದಲ್ಲಿ ಸುದ್ದಿ ಮಾಡಲು ಪತ್ರಕರ್ತರು ನ್ಯಾಯಾಲಯದಲ್ಲಿ ಜಮಾಯಿಸಿದ್ದರು. ಆ ವೇಳೆ, ಪ್ಯಾಸೆಜ್ ನಲ್ಲಿ ಪತ್ರಕರ್ತರು ನಿಂತಿದ್ದಾಗ ಅಲ್ಲಿಗೆ ಬಂದ ನಾಲ್ವರು ಅಪರಿಚಿತರು ಪತ್ರಕರ್ತರ ಗುರುತಿನ ಬಗ್ಗೆ ಪ್ರಶ್ನಿಸಿದ್ದಾರೆ. ಬಳಿಕ ಹಲ್ಲೆ ನಡೆಸಿದ್ದಾರೆ. ಸುಮಾರು 50 ಮೀಟರ್ ದೂರದವರೆಗೂ ಅವರನ್ನು ಎಳೆದೊಯ್ದು ಕ್ರೌರ್ಯ ಮೆರೆದಿದ್ದಾರೆ ಎನ್ನಲಾಗಿದೆ. ಪತ್ರಕರ್ತನ ಮೊಬೈಲ್ ಫೋನನ್ನು ಕಸಿದುಕೊಂಡ ದುಷ್ಕರ್ಮಿಗಳು ಕೋರ್ಟ್ ಸಂಕೀರ್ಣದಿಂದ ತೆರಳುವಂತೆ ಧಮ್ಕಿ ಹಾಕಿದ್ದಾರೆ.
ಈ ಬಗ್ಗೆ ರಕ್ಷಿತ್ ಗೌಡ ಅವರು ಹಲಸೂರು ಗೇಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
























































