ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ನೆರೆದಿದ್ದ ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರ ಅಹವಾಲು ಆಲಿಸಿದರು.
“ಕಾರ್ಯಕರ್ತರೊಂದಿಗೆ ನಿಮ್ಮ ಸಿಎಂ” (ಅಹವಾಲು ಸ್ವೀಕಾರ) ಕಾರ್ಯಕ್ರಮದಲ್ಲಿ ಭಾಗಿಯಾದ ಸಿದ್ದರಾಮಯ್ಯ, ವಿಕಲಚೇತನರ ಬಳಿಗೆ ಹೋಗಿ ಅಹವಾಲುಗಳನ್ನು ಸ್ವೀಕರಿಸಿ ಗಮನಸೆಳೆದರು. “ಕಾರ್ಯಕರ್ತರ ಎಲ್ಲಾ ಅಹವಾಲುಗಳನ್ನು ವಿಂಗಡಿಸಿ ನನಗೆ ನೀಡಬೇಕು” ಎಂದು ಅಧಿಕಾರಿಗಳಿಗೆ ತಿಳಿಸಿದರು.
ಇದೇ ವೇಳೆ, ನಾವು ಕಾಂಗ್ರೆಸ್ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಇದ್ದೇವೆ ನಮಗೆ ಮನೆ ಕೊಡಿ ಎಂದು ಜಯಂತಿ, ಅರ್ಚನಾ, ಸುಗಂಧಿ, ಆಶಾ, ಸಂಧ್ಯಾ ಅವರು ಮನವಿ ಸಲ್ಲಿಸಿದಾಗ “ನಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಾ ಇದ್ದೀರಾ. ನಿಮಗೆ ರಾಜೀವ್ ಗಾಂಧಿ ವಸತಿ ನಿಗಮದ ಅಡಿ ಮನೆ ನೀಡುವಂತೆ ಕ್ರಮ ತೆಗೆದುಕೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶೇ.90 ರಷ್ಟು ನಿಗಮ ಮಂಡಳಿಯ ಅಧ್ಯಕ್ಷರನ್ನು ನೇಮಕಾತಿ ಮಾಡಲಾಗಿದೆ. ಸುಮಾರು 10-15 ಮಂಡಳಿಗಳಿಗೆ ನಾನು ಮತ್ತು ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್ ಅವರು ಸೇರಿ ಚರ್ಚೆ ನಡೆಸಿ ನೇಮಕಾತಿ ಮಾಡುತ್ತೇವೆ. ಈಗಾಗಲೇ ಜಿಲ್ಲಾ, ತಾಲ್ಲೂಕು ಗ್ಯಾರಂಟಿ ಸಮಿತಿಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಒಂದಷ್ಟು ಮಂಡಳಿಗಳಲ್ಲಿ ನಿರ್ದೇಶಕ ಸ್ಥಾನಕ್ಕೆ ಅವಕಾಶ ಮಾಡಿಕೊಡಲಾಗಿದೆ” ಎಂದು ಹೇಳಿದರು.
ರಾಜ್ಯಸಭಾ ಸಂಸದರಾದ ಜಿ.ಸಿ.ಚಂದ್ರಶೇಖರ್, ಶಾಸಕರಾದ ತನ್ವೀರ್ ಸೇಟ್ ಅವರು ಅಹವಾಲು ಸಲ್ಲಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದರು.







































































