ಬೆಂಗಳೂರು: ರೈತರ ಸಂಕಷ್ಟದ ವಿಚಾರದಲ್ಲಿ ರಾಜಕೀಯ ಮಾಡದೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.
ಕೇಂದ್ರದಿಂದ ಪರಿಹಾರ ಪಡೆಯಲು ಈಗಾಗಲೇ ಮೂರು ಬಾರಿ ಮನವಿ ಸಲ್ಲಿಸಲಾಗಿದೆ. ಕೃಷಿ ಸಚಿವರು, ಗೃಹ ಸಚಿವರು ಹಾಗೂ ಪ್ರಧಾನಮಂತ್ರಿಗಳ ಕಚೇರಿಗೆ ಭೇಟಿ ಮಾಡಲು ಸಮಯ ಕೋರಿದರೂ ಪ್ರತಿಕ್ರಿಯೆ ಬಂದಿಲ್ಲ. ಕಳೆದ ಬಾರಿ ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ ಕೇವಲ ₹3,500 ಕೋಟಿ ಪರಿಹಾರ ಬಿಡುಗಡೆಯಾಗಿತ್ತು. ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸಬಾರದು ಎಂದರು.
ಪರಿಹಾರಕ್ಕಾಗಿ ಸರ್ವಪಕ್ಷ ಸಭೆ ನಡೆಸಿ, ಎಲ್ಲ ಪಕ್ಷಗಳ ನಾಯಕರನ್ನೊಳಗೊಂಡ ನಿಯೋಗವನ್ನು ದೆಹಲಿಗೆ ಕರೆದೊಯ್ಯುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಸದ್ಯಕ್ಕೆ ಸುಪ್ರೀಂ ಕೋರ್ಟ್ ಮೊರೆ ಹೋಗುವ ನಿರ್ಧಾರವಿಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪ್ರಭಾವ ಬಳಸಿ ಕೇಂದ್ರದಿಂದ ಪರಿಹಾರ ಕೊಡಿಸಲು ಪ್ರಯತ್ನಿಸಲಿ. ರಾಜ್ಯ ಸರ್ಕಾರ ಎರಡು ಹಂತಗಳಲ್ಲಿ ತಲಾ ₹1,250 ಕೋಟಿ ಪರಿಹಾರ ನೀಡುವ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಗೈಡೆನ್ಸ್ ಮೌಲ್ಯ ಪರಿಷ್ಕರಣೆ: ಖಾಸಗಿ ಮಾರುಕಟ್ಟೆಯಲ್ಲಿ ಭೂಮಿಯ ಮೌಲ್ಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗೈಡೆನ್ಸ್ ಮೌಲ್ಯ ಪರಿಷ್ಕರಣೆಗೆ ವಿಶ್ಲೇಷಣೆ ನಡೆಯುತ್ತಿದೆ. ಬಳಿಕ ಪ್ರದೇಶವಾರು ಹೆಚ್ಚಳ ನಿರ್ಧರಿಸಲಾಗುವುದು ಎಂದರು.
ಸಿದ್ದರಾಮಯ್ಯ ಅವರಿಗೆ ಅಗೌರವವಿಲ್ಲ: ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ತಡವಾಗಿ ಬಂದಿದ್ದರಿಂದ ಐದನೇ ಸಾಲಿನಲ್ಲಿ ಕುಳಿತಿದ್ದರು. ಅವರನ್ನು ಅವಮಾನಿಸುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಎಥೆನಾಲ್ ಮಿಶ್ರಣ: ಪ್ರಯೋಗಾಲಯದ ವರದಿಗಳ ಆಧಾರದಲ್ಲಿ ಆಹಾರ ಸಚಿವ ರಿಜ್ವಾನ್ ಅರ್ಷದ್ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಇಂತಹ ಪರಿಸ್ಥಿತಿ ಉಂಟಾಗಬಾರದು ಎಂಬುದು ಅವರ ಉದ್ದೇಶ ಎಂದರು.
ಬಿಬಿಎಂಪಿ, ಜಿಬಿಎ ಚುನಾವಣೆ: ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಆಹ್ವಾನಿಸಲಾಗಿದ್ದು, ಅಂತಿಮ ಪಟ್ಟಿ ಸಿದ್ಧವಾದ ಬಳಿಕ ಚುನಾವಣೆ ನಡೆಸಬಹುದು. 2011ರ ಜನಗಣತಿ ಆಧಾರದಲ್ಲಿ ಚುನಾವಣೆ ನಡೆಸುವ ಆಯ್ಕೆಯನ್ನೂ ಪರಿಶೀಲಿಸಬೇಕಿದೆ ಎಂದು ಹೇಳಿದರು.















































































