ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ 2 ಎ ಗೆ ಸೇರ್ಪಡೆ ಮಾಡುವ ಕುರಿತಾಗಿ, ಶ್ರೀ ಬಸವ ಮೃತ್ಯುಂಜಯ ಮಹಾಸ್ವಾಮಿಗಳು ಹಾಗೂ ವಚನನಂದಾ ಶ್ರೀಗಳಿಗೆ ದಾಖಲೆಗಳನ್ನು ನೀಡುವಂತೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಪತ್ರ ಬರೆದಿದೆ. ಈ ಬೆಳವಣಿಗೆ ಬಗ್ಗೆ ಸಚಿವರಾದ ಮುರುಗೇಶ್ ಆರ್.ನಿರಾಣಿ ಹಾಗೂ ಸಿ.ಸಿ.ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಮಾಚ್೯ 22 ರಂದು ( ಸೋಮವಾರ) ಸೂಕ್ತ ಸಾಕ್ಷ್ಯಾಧಾರಗಳನ್ನು ಆಯೋಗಕ್ಕೆ ನೀಡಬೇಕೆಂದು
ಕೂಡಲಸಂಗಮ ಮಠದ ಶ್ರೀಗಳು ಹಾಗೂ ಹರಿಹರ ಪೀಠದ ಶ್ರೀ ವಚನನಂದಾ ಮಹಾಸ್ವಾಮೀಜಿಗಳಿಗೆ ಪತ್ರ ಬರೆದಿರುವುದು ‘ ಸಕಾರಾತ್ಮಕ’ ಬೆಳವಣಿಗೆ ಎಂದು ಸಚಿವರು ಬಣ್ಣಿಸಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿ ಅವರು, ಪತ್ರ ಬರೆದು ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 2 ಗೆ ಸೇರ್ಪಡೆ ಮಾಡುವ ಬಗ್ಗೆ ತಮ್ಮಲ್ಲಿ ಯಾವುದೇ ರೀತಿಯ ದಾಖಲೆಗಳು ಇದ್ದರೆ, ಖುದ್ದು ಹಾಜರಾಗಿ ಇಲ್ಲವೇ ಸಂಬಂಧಿಪಟ್ಟವರ ಮೂಲಕ ಮಾಹಿತಿಯನ್ನು ನೀಡಬಹುದು ಎಂದು
ಉಭಯ ಶ್ರೀಗಳಿಗೆ ಪತ್ರ ಮೂಲಕ ಮನವಿ ಮಾಡಲಾಗಿದೆ. ಆಯೋಗವು ಸಮುದಾಯದ
ಬೇಡಿಕೆಗೆ ಸ್ಪಂದಿಸಿ ಇಂತಹ ದಿಟ್ಟ ನಿರ್ಧಾರ ತೆಗೆದುಕೊಂಡಿರುವುದು ಸರಿಯಾದ ಕ್ರಮವಾಗಿದೆ. ಖಂಡಿತವಾಗಿಯೂ ನಮಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವನ್ನು ಸಚಿವರು
ವ್ಯಕ್ತಪಡಿಸಿದ್ದಾರೆ.
ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ನಂತರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಸಮುದಾಯದ ಕಲ್ಯಾಣಕ್ಕಾಗಿ ಕೂಡಲಸಂಗಮ ಮಠದ ಶ್ರೀ ಬಸವಮೃತ್ಯುಂಜಯ ಮಹಾಸ್ವಾಮೀಜಿ ಹಾಗೂ ಹರಿಹರ ಪೀಠದ ಶ್ರೀ ವಚನನಂದಾ ಮಹಾಸ್ವಾಮೀಜಿಗಳು ಆಹೋರಾತ್ರಿ ಹೋರಾಟ ನಡೆಸಿದ ಪರಿಣಾಮ ಇದಕ್ಕೆ ಕಾರಣ ಎಂದಿದ್ದಾರೆ.
ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗ ಎಂದು ಗುರುತಿಸಿದವರೇ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಪಂಚಮಸಾಲಿ ಲಿಂಗಾಯತ ಸಮಯದಾಯವನ್ನು 3B ಗೆ ಸೇರಿಸಿದ್ದವರು ಎಂದು ಸ್ಮರಿಸಿದ್ದಾರೆ.
ಸಮುದಾಯದ ಬೇಡಿಕೆಗೆ ಓಗೊಟ್ಟು
ಲೋಕಸಭಾ ಸದಸ್ಯರು ,ಶಾಸಕರು,ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಸೇರಿದಂತೆ ಅನೇಕರು ಈ ಹೋರಾಟಕ್ಕೆ ಶ್ರಮಿಸಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ನಿರಾಣಿ ಅವರು ಹೇಳಿದ್ದಾರೆ.
ಈಗ 2ಎ ಮೀಸಲಾತಿಗೆ ಪ್ರಸ್ತಾವನೆ ಬಂದಿದೆ. ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳಿಸಿಕೊಟ್ಟಿದ್ದಾರೆ. ಆಯೋಗದ ವರದಿ ಬಂದ ನಂತರ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ನಮಗೆ ಪ್ರತಿಯೊಂದು ಹಂತದಲ್ಲೂ ಅಗತ್ಯವಾದ ಸಲಹೆ ಸೂಚನೆ ಹಾಗೂ ಮಾರ್ಗದರ್ಶನ ನೀಡಿದ್ದಾರೆ. ಅವರ ಈ ಸಹಾಯವನ್ನು ನಮ್ಮ ಸಮುದಾಯ ಎಂದಿಗೂ ಮರೆಯುವುದಿಲ್ಲ ಎಂದು
ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಗೃಹ ಸಚಿವ ಬೊಮ್ಮಯಿ ಅವರ ಸಹಕಾರವನ್ನು ಸ್ಮರಿಸಿದ್ದಾರೆ.
ನಿವೃತ್ತ ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ.ಆಡಿ, ಸರಕಾರದ ನಿವೃತ್ತ ಮುಖ್ಯ ನ್ಯಾಯಮೂರ್ತಿ ರತ್ನಪ್ರಭಾ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದೆ.ಈ ಸಮಿತಿಯು ಕುಲಂಕುಶವಾಗಿ ಅಧ್ಯಯನ ನಡೆಸಿ ವರದಿ ನೀಡಲಿದೆ ಎಂದು ಹೇಳಿದ್ದಾರೆ.
ಸಮಸ್ತ ವೀರಶೈವ- ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು.ಅದರಲ್ಲೂ ಆರ್ಥಿಕವಾಗಿ ತೀರಾ ಹಿಂದುಳಿದ ಹಡಪದ, ಸವಿತಾ ಸಮಾಜದವರು ಸೇರಿದಂತೆ ಧ್ವನಿ ಇಲ್ಲದವರಿಗೆ ಮೀಸಲಾತಿ ಸೌಲಭ್ಯ ಸಿಗಬೇಕು ಎಂದು ನಿರಾಣಿ ಅವರು ಮನವಿ ಮಾಡಿದ್ದಾರೆ. ವೀರಶೈವ- ಲಿಂಗಾಯತರಿಗೆ ಮೀಸಲಾತಿ ನೀಡುವುದರ ಜೊತೆಗೆ ಯಾರು ವಂಚಿತರಾಗಿದ್ದಾರೋ ಅಂತಹವರಿಗೆ ಮೀಸಲಾತಿ ಸೌಲಭ್ಯ ಸಿಗಬೇಕು. ಇದಕ್ಕೆ ನಮ್ಮದೇನು ಅಭ್ಯಂತರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಂಚಮಸಾಲಿ ಜನಾಂಗದವರು ತಮ್ಮ ಜನಾಂಗ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಹಿಂದುಳಿದಿದೆ. ಸಮಾಜದ ಬಡವರಿಗೆ ತೊಂದರೆಯಾಗಿರುವುದರಿಂದ, ತಮ್ಮ ಜನಾಂಗವನ್ನು ಹಿಂದುಳಿದ ವರ್ಗ 2-ಎ ಮೀಸಲಾತಿಗೆ ಒಳಪಡಿಸಲು ಮನವಿ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಈ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ
ಮುಖ್ಯಮಂತ್ರಿಯವರು ದಿನಾಂಕ:05.02.2021 ರಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಕೋರಿದ್ದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ 1995 ರಡಿಯಲ್ಲಿ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಮೃತಿಗಳ ಬಗ್ಗೆ ಸಮೀಕ್ಷೆ ನಡೆಸುವುದು. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ನಾಗರೀಕರ ವರ್ಗಗಳನ್ನು ಗುರುತಿಸುಂತೆ ಸೂಚಿಸಲಾಗಿತ್ತು. ಪಂಚಮಸಾಲಿ ಜನಾಂಗದ 2-ಎ ಮೀಸಲಾತಿ ಬೇಡಿಕೆಯ ಬಗ್ಗೆ ಸಮಗ್ರವಾಗಿ ನಿಯಮಾನುಸಾರ ಅಧ್ಯಯನ ಮಾಡಿ ವರದಿಯನ್ನು ಸರ್ಕಾರಕ್ಕೆ, ಸಲ್ಲಿಸುವಂತೆ ಪತ್ರದಲ್ಲಿ ಕೋರಲಾಗಿತ್ತು.