ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಉಲ್ಬಣಗೊಂಡಿರುವಂತೆಯೇ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಆಕ್ಸಿಜನ್ ಕೊರತೆಯ ಅವಾಂತರಗಳಿಂದಾಗಿ ಅನೇಕ ಜೀವಗಳು ಬಲಿಯಾಗುತ್ತಿವೆ. ಈ ಅವಾಂತರಗಳಿಂದಾಗಿ ಸಾರ್ವಜನಿಕರು ಸಿಡಿದೆದ್ದಿರುವಂತೆಯೇ ಇನ್ನೊಂದೆಡೆ ಚಾಮರಾಜನಗರ ದುರಂತ ಸಂಬಂಧ ಮುಖ್ಯಮಂತ್ರಿ, ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಅಧಿಕಾರಿಗಳ ವಿರುದ್ದ ಕೇಸ್ ದಾಖಲಿಸಬೇಕೆಂದು ಕೋರಿ ಹೈಕೋರ್ಟ್‌ಗೆ ದೂರೊಂದು ಸಲ್ಲಿಕೆಯಾಗಿದೆ.
ಬೆಂಗಳೂರಿನ ಕೆ.ಎ.ಪೌಲ್ ಎಂಬವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಕೊರೋನಾ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕ್ರಿಮಿನಲ್ ನೆಗ್ಲಿಜೆನ್ಸ್‌ನಿಂದಾಗಿ ದುರಂತಗಳು ಸಂಭವಿಸಿದ್ದು, ಚಾಮರಾಜನಗರದ ಆಸ್ಪತ್ರೆಯಲ್ಲಿ 24 ಮಂದಿ ಅಮಾಯಕರು ಬಲಿಯಾಗಿದ್ದಾರೆ ಎಂದು ದೂರುದಾರರು ಮುಖ್ಯ ನಾಯಮೂರ್ತಿಯವರ ಗಮನಸೆಳೆದಿದ್ದಾರೆ.
ಕೋವಿಡ್ ಪರಿಸ್ಥಿತಿ ನಿಭಾಯಿಸಲು ಕ್ರಮ ಕೈಗೊಂಡಿರುವ ಸರ್ಕಾರ ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರ ತಂಡಗಳನ್ನು ರಚಿಸಿದೆ. ಪರಿಸ್ಥಿತಿ ಕುರಿತು ಅಧಿಕಾರಿಗಳು ಸಮಯಾನುಸಾರ ಮಾಹಿತಿ ಪೇರಿಸುವ ಕರ್ತವ್ಯ ಮಾಡಬೇಕಿದೆ. ಆದರೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಆಕ್ಸಿಜನ್ ವಿಚಾರದಲ್ಲೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಗಂಭೀರ ಅಂಶಗಳನ್ನು ಈ ಅರ್ಜಿಯಲ್ಲಿ ದೂರುದಾರರು ಉಲ್ಲೇಖಿಸಿ ನ್ಯಾಯಲಯದ ಗಮನಸೆಳೆದಿದ್ದಾರೆ.
ಮಾಧ್ಯಮಗಳ ವರದಿಯೇ ದಾಖಲೆ:
ಈ ಸಂಬಂಧ ಪತ್ರಿಕೆಗಳ ಹಾಗೂ ಮಾಧ್ಯಮಗಳ ವರದಿಗಳನ್ನು ದಾಖಲೆಗಳಾಗಿ ಕೋರ್ಟ್‌ನ ಮುಂದಿಟ್ಟಿರುವ ದೂರುದಾರರು, ಚಾಮರಾಜನಗರ ದುರಂತಕ್ಕೆ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಸಂಸದ ಶ್ರೀನಿವಾಸ್ ಪ್ರಸಾದ್, ಶಾಸಕ ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಇತರ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ನಿರ್ದೇಶಿಸಬೇಕೆಂದು ಹೈಕೋರ್ಟನ್ನು ಕೋರಿದ್ದಾರೆ.
ದೊರೆರಾಜು ನೇಮಕಕ್ಕೆ ಕೋರಿಕೆ:
ಇದೇ ವೇಳೆ, ಕೋವಿಡ್ ಸಾಂಕ್ರಾಮಿಕ ರೋಗದಿಂದ ಜನರ ಜೀವ ಉಳಿಸುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು ದೂರಿನಲ್ಲಿ ಕೋರಿರುವ ಕೆ.ಎ.ಪೌಲ್, ಈ ಪ್ರಕರಣದ ವಿಚಾರಣೆಗಾಗಿ ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ದೊರೆರಾಜು ಅವರನ್ನು ನೇಮಿಸುವಂತೆಯೂ ಕೋರಿದ್ದಾರೆ.