ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಹರಸಾಹಸ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ಚಾಮರಾಜನಗರ, ಕಲಬುರಗಿ, ಬೆಳಗಾವಿಯಲ್ಲಿ ಆಮ್ಲಜನಕ ಕೊರತೆಯಿಂದ ಉಂಟಾದ ಅನಾಹುತಗಳೂ ಸರ್ಕಾರಕ್ಕೆ ಸವಾಲೆಂಬಂತಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯತಂತ್ರ ರೂಪಿಸಲು ಇಂದು ಸಿಎಂ ಕರೆದಿದ್ದ ಸಂಪುಟ ಸಭೆ ಎಲ್ಲರ ಕುತೂಹಲದ ಕೇಂದ್ರಬಿಂದುವಾಯಿತು.
ಸುದೀರ್ಘ ಹೊತ್ತು ನಡೆದ ಈ ಸಭೆಯಲ್ಲಿ ಕೋವಿಡ್ ಸೋಂಕಿತರಿಗೆ ಬೆಡ್ ವ್ಯವಯ, ಆಮ್ಲಜನಕ ಪೂರೈಕೆ, ವೆಂಟಿಲೇಟರ್ ಸೌಕರ್ಯ ಕಲ್ಪಿಸುವ ಕುರಿತು ಚರ್ಚೆ ನಡೆಯಿತು. ಜಗದೀಶ್ ಶೆಟ್ಟರ್, ಅಶೋಕ್ ಸಹಿತ ಸಚಿವರಿಗೆ ವಿವಿಧ ಹೊಣೆ ಹಂಚುವ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಅವರವರ ಜಿಲ್ಲೆಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಣೆ ನೋಡಿಕೊಳ್ಳುವ ಬಗ್ಗೆ ಸಿಎಂ ಯಡಿಯೂರಪ್ಪ ನಿರ್ದೇಶನ ನೀಡಿದರು. ಇದೇ ವೇಳೆ, ಸೋಂಕು ನಿಯಂತ್ರಣ ಸಂಬಂಧ ಬಿಗಿ ಕ್ರಮಗಳನ್ನು ಕೈಗೊಂಡು ಲಾಕ್‌ಡೌನ್ ನಿಯಮಗಳನ್ನು ಮತ್ತಷ್ಟು ದಿನ ವಿಸ್ತರಿಸುವ ಅಗತ್ಯದ ಬಗ್ಗೆಯೂ ಚರ್ಚೆ ನಡೆಯಿತಾದರೂ ಪ್ರಸ್ತುತ ಜಾರಿಯಲ್ಲಿರುವ ಲಾಕ್‌ಡೌನ್ ಅವಧಿ ಪೂರ್ಣಗೊಂಡ ನಂತರವೇ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತೆನ್ನಲಾಗಿದೆ.
ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ವಿವರ ಒದಗಿಸಿದ ಸಿಎಂ ಯಡಿಯೂರಪ್ಪ, ಮೇ 12 ರ ವರೆಗೆ ಕಠಿಣ ನಿಯಮ ಇರಲಿದ್ದು, ಲಾಕ್ ಡೌನ್ ಮುಂದುವರೆಸುವ ಯೋಚನೆ ಸರ್ಕಾರದ ಮುಂದಿಲ್ಲ. ಆದರೂ ಮೇ 12ರ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳ ಹೊಣೆ ಹೊರಬೇಕು. ರಾಜ್ಯಕ್ಕೆ ಅಗತ್ಯ ಆಕ್ಸಿಜನ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಪತ್ರಕರ್ತರನ್ನು ಫ್ರಂಟ್‌ಲೈನ್ ವಾರಿಯರ್ಸ್ ಎಂದು ಪರಿಗಣಿಸಿ, ಎಲ್ಲಾ ಪತ್ರಕರ್ತರಿಗೂ ಲಸಿಕೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಿಎಂ ತಿಳಿಸಿದರು.