ದೆಹಲಿ: ದೇಶದಲ್ಲಿ ಕೊರೋನಾ ಸಂಕ್ರಾಮಿಕ ರೋಗ ಕೋವಿಡ್ ಅಲೆ ಸುನಾಮಿಯಂತೆ ಅಪ್ಪಳಿಸಿದ್ದು ಲಾಕ್‌ಡೌನ್ ಹೊರತು ಪರ್ಯಾಯ ಮಾರ್ಗವೇ ಇಲ್ಲ ಎಂಬಂತಾಗಿದೆ. ಈ ಸಂಬಂಧ ಸೂಕ್ತ ಹೆಜ್ಜೆ ಇಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಕೋವಿಡ್ ಎರಡನೇ ಅಲೆ ದೇಶಾದ್ಯಂತ ತಲ್ಲಣ ಸೃಷ್ಟಿಸುತ್ತಿದ್ದು ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಸೋಂಕಿತರು ಬಲಿಯಾಗುತ್ತಿದ್ದಾರೆ. ಪ್ರತಿದಿನವೂ ಮೂರೂವರೆ ಲಕ್ಷಕ್ಕೂ ಹೆಚ್ಚು ಹೊಸ ಪಾಸಿಟಿವ್ ಕೇಸ್‌ಗಳು ದೃಢಪಡುತ್ತಿದ್ದು ಪರಿಸ್ಸಿತಿ ಕಗ್ಗಂಟಾಗುತ್ತಿದೆ. ಹೀಗಾಗಿ ಸೋಂಕಿನ ಸಂಕೋಲೆ ಮುರಿಯಲು ನಿಷ್ಟೂರ ಕ್ರಮ ಅನಿವಾರ್ಯವಾಗಿದೆ.
ಈ ನಡುವೆ, ಕೆಲವು ದಿನಗಳ ಹಿಂದೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ಲಾಕ್‌ಡೌನ್ ಎಂಬುದು ಕೊನೆಯ ಅಸ್ತ್ರವಾಗಿದೆ’ ಎಂದಿದ್ದರು. ಆದರೆ ಈ ಅಂತಿಮ ಅಸ್ತ್ರ ಪ್ರಯೋಗಿಸಲು ಮೋದಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ.
ಅಮೆರಿಕಾ ಅಧ್ಯಕ್ಚರ ವೈದ್ಯಕೀಯ ಸಲಹೆಗಾರ ಡಾ.ಆಂಥೊನಿ ಕೂಡಾ ಭಾರತದಲ್ಲಿ ಲಾಕ್‌ಡೌನ್ ಜಾರಿಯ ಅನಿವಾರ್ಯತೆಯತ್ತ ಬೊಟ್ಟು ಮಾಡಿದ್ದಾರೆ. ಇತ್ತ, ಸೋಂಕು ತಡೆಗೆ ಲಾಕ್‌ಡೌನ್ ಜಾರಿ ಬಗೆಗಿನ ಸುಪ್ರೀಂ ಕೋರ್ಟ್ ಅಭಿಪ್ರಾಯ ಕೂಡಾ ಸರ್ಕಾರಕ್ಕೆ ನಿರ್ದೇಶನದಂತಿದೆ. ಅಷ್ಟೇ ಅಲ್ಲ, ಬಹುತೇಕ ರಾಜಕೀಯ ಪಕ್ಷಗಳು ಕೂಡಾ ಲಾಕ್‌ಡೌನ್ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ. ಅದರಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಾಕ್‌ಡೌನ್ ಜಾರಿಗೆ ನೀಡಿರುವ ಸಲಹೆ ರಾಷ್ಟ್ರರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಇದೇ ಅಭಿಪ್ರಾಯವನ್ನು ಉಲ್ಲೇಖಿಸಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಕೂಡಾ ಸಂಪೂರ್ಣ ಲಾಕ್‌ಡೌನ್ ಜಾರಿಯಿಂದ ಕೋವಿಡ್ 2ನೇ ಅಲೆಯನ್ನು ನಿಯಂತ್ರಿಸಬಹುದು ಎಂದು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ. ದೇಶದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಕೊರೊನಾ ತಡೆಗೆ ಸರ್ಕಾರಗಳು ಕೈಗೊಂಡಿರುವ ಕ್ರಮಗಳು ಯಾವುದೇ ಫಲಶೃತಿ ನೀಡುತ್ತಿಲ್ಲ. ಪ್ರಸ್ತುತ ಅವರಿಸಿರುವ ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಸಂಪೂರ್ಣ ಲಾಕ್‌ಡೌನ್ ನಿಂದ ಕೊರೊನಾ ಪ್ರಕರಣಗಳನ್ನು ತಗ್ಗಿಸಲು ಅನುಕೂಲವಾಗುತ್ತದೆ ಎಂದಿದ್ದಾರೆ.
ಈ ನಡುವೆ, ಇಂದು ಸಂಪುಟ ಸಹೋದ್ಯೋಗಿಗಳ ಜೊತೆ ಸಭೆ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳೇ ಹೆಚ್ಚಿವೆ ಎಂದು ಹೇಳಲಾಗುತ್ತಿದೆ.