ಮೈಸೂರು: ಮೈಸೂರು ಜಿಲ್ಲೆಯಲ್ಲಿ ವಿಧಾನಪರಿಷತ್ ಚುನಾವಣೆ ಪ್ರಚಾರ ಆರಂಭಿಸಲಾಗಿದೆ. ಶುಕ್ರವಾರ ಹುಣಸೂರು ಭಾಗದಲ್ಲಿ ಇಂದು ಹೆಚ್.ಡಿ.ಕೋಟೆ ಭಾಗದಲ್ಲಿ ಚುನಾವಣೆ ಪ್ರಚಾರ ಕೈಗೊಳ್ಳಲಾಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಮೈಸೂರು ಭಾಗದ ಅನ್ಯ ಪಕ್ಷದವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಕ್ಷ ಸೇರ್ಪಡೆ ಕುರಿತು ಚರ್ಚೆಯಾಗುತ್ತಿದೆ. ಅಂತಿಮವಾಗಿ ಪಕ್ಷದ ಅಧ್ಯಕ್ಷರು ತೀರ್ಮಾನ ಮಾಡಲಿದ್ದಾರೆ ಎಂದವರು ತಿಳಿಸಿದರು.
ಮೊದಲ ಬ್ಯಾಚ್ ನಲ್ಲಿ ಐದಾರು ಮಂದಿ ಪಕ್ಷಕ್ಕೆ ಸೇರಿದ್ದಾರೆ. ಈಗ ಎರಡನೇ ಬ್ಯಾಚ್ ರೆಡಿಯಾಗುತ್ತಿದೆ. ವಿವಿಧ ಹಂತಗಳಲ್ಲಿ ಚರ್ಚೆ ನಡೆಯುತ್ತಿದ್ದು, ಗ್ರೀನ್ ಸಿಗ್ನಲ್ ಸಿಕ್ಕಬಳಿಕ ಸೇರ್ಪಡೆಯಾಗಲಿದ್ದಾರೆ ಎಂದ ಅವರು, ಘಟಾನುಘಟಿ ನಾಯಕರು ಸೇರ್ಪಡೆಯಾಗಲಿದ್ದಾರೆ. ಸದ್ಯಕ್ಕೆ ಹೆಸರು ಬಹಿರಂಗ ಪಡಿಸುವಂತಿಲ್ಲ. ಮೈಸೂರು, ಹಳೆ ಮೈಸೂರು ಭಾಗದ ಐದಾರು ಮಂದಿ ಯಾವುದೇ ಷರತ್ತು ಇಲ್ಲದೇ ಸೇರುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಎರಡು ಪಕ್ಷದವರೂ ಇದ್ದಾರೆ ಎಂದರು.
ಕಾಂಗ್ರೆಸ್ ನಲ್ಲಿ ಆಂತರಿಕ ಬಿಕ್ಕಟ್ಟು ಉಂಟಾಗಿದೆ. ಎಐಸಿಸಿ ನಾಯಕತ್ವ ದುರ್ಬಲ ಆಗುತ್ತಿದ್ದಂತೆ ಇಲ್ಲಿ ಎಲ್ಲರೂ ನಾಯಕರು ಆಗಲು ಹೊರಟಿದ್ದಾರೆ. ಪರಿಸ್ಥಿತಿ ಇನ್ನೂ ವಿಕೋಪಕ್ಕೆ ಹೋಗಿ ಕಾಂಗ್ರೆಸ್ ಪಕ್ಷ ಇಬ್ಭಾಗವಾಗಲಿದೆ ಎಂದರು. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ವರ್ಸಸ್ ಡಿಕೆ ಶಿವಕುಮಾರ್ ಎಂಬುದೊಂದೆ ಅಲ್ಲ, ಅಲ್ಲಿ ನಾಲ್ಕು ಗುಂಪು ಇದೆ. ಒಬ್ಬರಿಗೊಬ್ಬರು ಸೇರುವುದಿಲ್ಲ. ಸಿಕ್ಕಾಗ ಕಾಟಾಚಾರಕ್ಕೆ ನಗ್ತಾರೆ. ಕೆಪಿಸಿಸಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಒಟ್ಟಾಗಿ ಹೋಗುವ ಯಾವ ಮುನ್ಸೂಚನೆ ಇಲ್ಲ ಎಂದು ಹೇಳಿದರು.
ಮುಖ್ಯಮಂತ್ರಿಗಳು ದುರ್ಬಲ ಇಲ್ಲ. ಎಲ್ಲರಿಗೂ ಅನುಕೂಲ ಆಗುವ ರೀತಿಯಲ್ಲಿ ಸಂಪುಟದಲ್ಲಿ ಸಾಧಕಬಾಧಕ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ಅಸ್ತಿತ್ವ ಉಳಿಸಿಕೊಳ್ಳಲು ಇಲ್ಲಸಲ್ಲದ ಮಾತಾಡ್ತಾರೆ. ನಾನು ಇದ್ದೀನಿ ಎಂದು ತೋರಿಸಿಕೊಳ್ಳಲಷ್ಟೇ ಮಾತನಾಡುತ್ತಾರೆ ಎಂದರು.
ಜಿಟಿ ದೇವೇಗೌಡರು ಅವರ ಕ್ಷೇತ್ರದಲ್ಲಿನ ಕೆಲವು ಕಾರ್ಯಕ್ರಮಗಳ ಉದ್ಘಾಟನೆ ಗೆ ಆಹ್ವಾನಿಸಲು ಆಗಮಿಸಿದ್ದರು. ಆದರೆ ನೀತಿ ಸಂಹಿತೆ ಇರುವುದರಿಂದ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳಲಾಯಿತು. ಸ್ವಕ್ಷೇತ್ರದ ಜಿಲ್ಲೆಯ ಉಸ್ತುವಾರಿ ಕೊಡಬಾರದು ಎಂದು ಮೈಸೂರು ಜಿಲ್ಲೆ ಕೊಟ್ಟಿದ್ದಾರೆ ಎಂದು ಹೇಳಿದರು.