ಬೆಂಗಳೂರು: ಕೊರೋನಾ ಉಲ್ಬಣಗೊಂಡ ಸಂದರ್ಭದಲ್ಲಿ ಸೋಂಕು ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಘೋಷಿಸಿರುವ ನೈಟ್ ಕರ್ಫ್ಯೂ ಆದೇಶಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಬಿಜೆಪಿ ಸರ್ಕಾರವು ನಗರಗಳಲ್ಲಿ ರಾತ್ರಿ ಕರ್ಪ್ಯೂಹೇರಲು ಕೈಗೊಂಡಿರುವ ಕ್ರಮ, ಕೊರೊನಾ ಓಡಿಸಲು ತಟ್ಟೆ ಬಡಿಯಲು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಕರೆಯಷ್ಟೇ ಬಾಲಿಷ ಕ್ರಮವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ರಾತ್ರಿ ತೆರೆದಿರುವ ಹೊಟೇಲ್, ಚಿತ್ರಮಂದಿರ ಮತ್ತು ಅಂಗಡಿಮುಂಗಟ್ಟುಗಳನ್ನು ಮುಚ್ಚಿದರೆ ಸಾಲದೇ? ಕೊರೊನಾ ನಿಯಂತ್ರಣಕ್ಕೆ ಯಾವ ರೀತಿಯಲ್ಲಿಯೂ ಉಪಯೋಗವಾಗದ ಆಯ್ದ ನಗರಗಳಲ್ಲಿ ರಾತ್ರಿ ಕರ್ಪ್ಯೂವಿನ ನಾಟಕ ಯಾಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ
ಕೊರೊನಾ ನಿಯಂತ್ರಿಸುವ ಪ್ರಾಮಾಣಿಕ ಇಚ್ಚೆ ಮುಖ್ಯಮಂತ್ರಿಗಳು ಹೊಂದಿದ್ದರೆ, ಮೊದಲು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮಕೈಗೊಳ್ಳಬೇಕು, ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು ಸೋಂಕಿತರಿಗೆ ತಕ್ಷಣ ಚಿಕಿತ್ಸೆ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದಿರುವ ಅವರು, ಕೋವಿಡ್ ವ್ಯಾಕ್ಸಿನ್ ಪ್ರಾರಂಭಿಸಿ 80 ದಿನಗಳು ಕಳೆದರೂ ಕೇವಲ ಶೇಕಡಾ ಒಂದರಷ್ಟು ಜನಸಂಖ್ಯೆಗೆ ಮಾತ್ರ ನೀಡಲು ಸಾಧ್ಯವಾಗಿದೆ. ರಾಜ್ಯದಲ್ಲಿ ಈಗಾಗಲೇ ವ್ಯಾಕ್ಸಿನ್ ಕೊರತೆಯ ದೂರು ಕೇಳಿಬರತೊಡಗಿದೆ. ಗಿಮಿಕ್‌ಗಳನ್ನು ಬಿಟ್ಟು ಈ ಕಡೆ ಗಮನಹರಿಸಿ ಎಂದು ಹೇಳಿದ್ದಾರೆ.