ಬೆಂಗಳೂರು: ಪ್ರದೇಶ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ವಿಚಾರ ಕುರಿತಂತೆ ನಾಯಕರ ನಡುವೆ ನಡೆಯುತ್ತಿರುವ ವಾಕ್ಸಮರ ಹೈಕಮಾಂಡ್‌ಗೆ ಮಜುಗರದ ಸನ್ನಿವೇಶ ಉಂಟುಮಾಡಿದೆ. ಈ ಸಂಬಂಧ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಪಕ್ಷದ ವರಿಷ್ಠರು ನೋಟಿಸ್ ನೀಡಿದ್ದಾರೆ ಎನ್ನಲಾದ ಬೆಳವಣಿಗೆ ಕುತೂಹಲ ಕೆರಳುವಂತೆ ಮಾಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಜಮೀರ್ ನಡುವೆ ಕೆಲವು ದಿನಗಳಿಂದ ಮಾತಿನ ಸಮರ ನಡೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರೆಂದು ಗುರುತಿಸಿಕೊಂಡಿರುವ ಜಮೀರ್ ಅಹ್ಮದ್, ನುಂದಿನ ಸಿಎಂ ವಿಚಾರ ಹಾಗೂ ಸಮುದಾಯದ ನಾಯಕತ್ವ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷರನ್ನು ಕೆಣಕುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಎಚ್ಚರಿಕೆಯ ನಂತರವೂ ಹೇಳಿಕೆ ನೀಡಿರುವ ಶಾಸಕ ಜಮೀರ್ ಅಹಮದ್ ಖಾನ್‌ಗೆ ಹೈಕಮಾಂಡ್ ನೋಟಿಸ್ ನೀಡಿದೆ. ಬಹಿರಂಗವಾಗಿ ಅಧ್ಯಕ್ಷರ ವಿರುದ್ಧ ಹೇಳಿಕೆ ನೀಡಿ ಪಕ್ಷಕ್ಕೆ ತೀವ್ರ ಇರಿಸು ಮುರಿಸು ಉಂಟು ಮಾಡದಂತೆ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ನಾಯಕ ಸುರ್ಜೇವಾಲ ಅವರು ಜಮೀರ್ ಅಹ್ಮದ್ ಖಾನ್ ಅವರಿಗೆ ಎಚ್ಚರಿಕೆಯ ನೋಟಿಸ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

























































