ನವದೆಹಲಿ: ಎಲ್ಲಾ ಕಾರ್ಮಿಕರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಕೇಂದ್ರ ಸರ್ಕಾರವು 9 ಕಾರ್ಮಿಕ ಕಾನೂನುಗಳನ್ನು ಒಗ್ಗೂಡಿಸಿ ಸಾಮಾಜಿಕ ಭದ್ರತಾ ಸಂಹಿತೆ ರೂಪಿಸಿದೆ. ಇದರ ಮೂಲಕ ಕಾರ್ಮಿಕರಿಗೆ ವಿಮೆ, ಪಿಂಚಣಿ, ಗ್ರಾಚ್ಯುಯಿಟಿ, ಗರ್ಭಾವಸ್ಥೆ ಭತ್ಯೆ ಮೊದಲಾದ ಹಕ್ಕುಗಳನ್ನು ಬಲಪಡಿಸಲಾಗುತ್ತದೆ.
ಈ ಸಂಹಿತೆ ಮೂಲಕ ಎಲ್ಲ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆಯ ಕಾನೂನು ವ್ಯವಸ್ಥೆ ನಿರ್ಮಿಸಲಾಗುತ್ತಿದೆ. ಇದರಡಿ, ಕಾರ್ಮಿಕರು ಹಾಗೂ ಉದ್ಯೋಗದಾರರಿಂದ ಸಂಗ್ರಹಿಸುವ ಮೊತ್ತವನ್ನು ಹಂತ ಹಂತವಾಗಿ ಸ್ಥಿರ ವ್ಯವಸ್ಥೆಯೊಳಗೆ ತರಲಾಗುತ್ತದೆ. ದುರ್ಬಲ ವರ್ಗದ ಕಾರ್ಮಿಕರ ಹಂಗಾಮಿ ಮೊತ್ತವನ್ನು ಸರ್ಕಾರವೇ ಭರಿಸಬಹುದು ಎಂದು ತಜ್ಞರು ಆಶಾವಾದ ವ್ಯಕ್ತಪಡಿಸಿದ್ದಾರೆ.
ESIC (ಕರ್ನಾಟಕ ಉದ್ಯೋಗ ವಿಮಾ ನಿಗಮ) ಮೂಲಕ ಲಘು ಕೊಡುಗೆಗೆ ಉಚಿತ ಚಿಕಿತ್ಸೆ:
• ಕಾರ್ಮಿಕರಿಗೆ ESIC ಆಸ್ಪತ್ರೆ ಮತ್ತು ಡಿಸ್ಪೆನ್ಸರಿಗಳಲ್ಲಿ ಉಚಿತ ಚಿಕಿತ್ಸಾ ಸೌಲಭ್ಯ ಲಭ್ಯವಾಗುತ್ತದೆ.
• ಸುಸಂಘಟಿತ ಹಾಗೂ ಅಸಂಘಟಿತ ವಲಯದ ಎಲ್ಲ ಕಾರ್ಮಿಕರಿಗೆ ESIC ಸೇವೆಗಳ ಬಾಗಿಲು ತೆರೆದಿದೆ.
• ದೇಶದ ಎಲ್ಲಾ ಜಿಲ್ಲೆಗಳವರೆಗೆ (566 ರಿಂದ 740 ಜಿಲ್ಲೆಗಳವರೆಗೆ) ESIC ಆಸ್ಪತ್ರೆ, ಡಿಸ್ಪೆನ್ಸರಿ ಹಾಗೂ ಶಾಖೆಗಳ ವಿಸ್ತರಣೆ.
• ಅಪಾಯಕಾರಿಯಾದ ಕೆಲಸದಲ್ಲಿರುವ ಕೇವಲ ಒಬ್ಬ ಕಾರ್ಮಿಕನಿಗೂ ಕೂಡ ESIC ಲಾಭ ನೀಡಲಾಗುತ್ತದೆ.
• ಹೊಸ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ಲಾಟ್‌ಫಾರ್ಮ್ ಹಾಗೂ ಗಿಗ್ ಕಾರ್ಮಿಕರಿಗೆ ESIC ಸೇರ್ಪಡೆಗೊಳ್ಳುವ ಅವಕಾಶ.
• ತೋಟ ಕಾರ್ಮಿಕರಿಗೆ ESIC ಲಾಭ ನೀಡಲಾಗುತ್ತದೆ.
• ಅಪಾಯಕಾರಿಯಾದ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳನ್ನು ESICನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕು.
ಸಾಮಾಜಿಕ ಭದ್ರತೆಯ ವಿಸ್ತರಣೆ:
• EPFO ಪಿಂಚಣಿ ಯೋಜನೆಯ ಲಾಭವನ್ನು ಸುಸಂಘಟಿತ, ಅಸಂಘಟಿತ ಮತ್ತು ಸ್ವ ಉದ್ಯೋಗಿತರಿಗೂ ವಿಸ್ತರಿಸಲಾಗುತ್ತದೆ.
• ಅಸಂಘಟಿತ ವಲಯದ ಸಮಗ್ರ ಭದ್ರತೆಗೆ ಸಾಮಾಜಿಕ ಭದ್ರತಾ ನಿಧಿ ಸ್ಥಾಪನೆ.
• ನಿಶ್ಚಿತ ಅವಧಿಯ ಉದ್ಯೋಗಿಗಳಿಗೆ ಗ್ರಾಚ್ಯುಯಿಟಿ ಪಡೆಯಲು ಕನಿಷ್ಠ ಸೇವಾ ಅವಧಿಯ ಅಗತ್ಯತೆ ತೆಗೆದು ಹಾಕಲಾಗಿದೆ.
• ನಿಶ್ಚಿತ ಅವಧಿಗೆ ನೇಮಿಸಲಾದ ಉದ್ಯೋಗಿಗಳಿಗೆ ಶಾಶ್ವತ ಉದ್ಯೋಗಿಗಳಂತೆಯೇ ಎಲ್ಲಾ ಭದ್ರತಾ ಸೌಲಭ್ಯಗಳನ್ನು ನೀಡಲಾಗುತ್ತದೆ.
• ಅಸಂಘಟಿತ ವಲಯದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ಸೃಷ್ಟಿಸಲು ಪೋರ್ಟಲ್‌ನಲ್ಲಿ ನೋಂದಣಿ ಪ್ರಕ್ರಿಯೆ.
• 20 ಗಿಂತ ಹೆಚ್ಚು ಕಾರ್ಮಿಕರನ್ನು ನೇಮಿಸಿರುವ ಸಂಸ್ಥೆಗಳು ಖಾಲಿ ಹುದ್ದೆಗಳ ವಿವರಗಳನ್ನು ಆನ್ಲೈನಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು.
• ESIC, EPFO ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಯುನಿವರ್ಸಲ್ ಖಾತೆ ಸಂಖ್ಯೆ (UAN).
• ಆಧಾರ್ ಆಧಾರಿತ ಯುನಿವರ್ಸಲ್ ಖಾತೆ ಸಂಖ್ಯೆ (UAN) ಮೂಲಕ ದೇಶಾದ್ಯಂತ ಸುಲಭವಾಗಿ ಸೇವೆಗಳ ವರ್ಗಾವಣೆಯ ಸಾಧ್ಯವಾಗಲಿದೆ.
ಕೇಂದ್ರ ಸರ್ಕಾರದ ಈ ನಡೆಯನ್ನು ಆರ್ಥಿಕ ತಜ್ಞರು ಹಾಗೂ ಕಾರ್ಮಿಕ ಸಂಘಗಳ ಮುಖಂಡರು ಶ್ಲಾಘಿಸಿದ್ದಾರೆ. ಹೊಸ ಭಾರತಕ್ಕೆ ಹೊಸ ಕಾರ್ಮಿಕ ಸಂಹಿತೆಯು ಸ್ವಾತಂತ್ರ್ಯೋತ್ತರದಲ್ಲಿ ಅತಿದೊಡ್ಡ ಸುಧಾರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.