ಬೆಂಗಳೂರು: ಸದಾ ಒಂದಿಲ್ಲೊಂದು ಕಾರ್ಯಕ್ರಮಗಳ ಮೂಲಕ ದೇಶದ ಗಮನಸೆಳೆಯುತ್ತಿರುವ ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯ ಈ ಬಾರಿ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸಮಾರಂಭ ವಿದ್ಯಾರ್ಥಿಗಳಿಗೆ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಯಿತು.
ಅಲಯನ್ಸ್ ಪಿಯು ಕಾಲೇಜಿನಲ್ಲಿ ಸ್ವಾತಂತ್ರ್ಯದ ಮಹಾ ಹಬ್ಬದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿ ಕುತೂಹಲದ ಕೇಂದ್ರಬಿಂದುವಾದರು. ಪ್ರತೀ ಹಬ್ಬಗಳಂದು ವಿದ್ಯಾರ್ಥಿಗಳಿಗಾಗಿ ಹಬ್ಬಗಳನ್ನು, ಉತ್ಸವಗಳನ್ನು ಆಯೋಜಿಸುತ್ತಾ ಬಂದಿರುವ ಈ ಶಿಕ್ಷಣ ಸಂಸ್ಥೆಯು ಈ ಬಾರಿ ದೇಶಭಕ್ತಿಯ ಸಂಕೇತವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಾತಂತ್ರ್ಯೋತ್ಸವಕ್ಕೆ ಆಕರ್ಷಣೆ ತುಂಬಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ಪ್ರತಿಭಾಪ್ರದರ್ಶನ ಹಾಗೂ ಅತಿಥಿಗಳ ಪ್ರೇರಣಾದಾಯಕ ಸಂದೇಶಗಳು ಸಮಾರಂಭದ ಆಕರ್ಷಣೆಯಾಗಿದ್ದವು.
ರೋಟರಿ ಕ್ಲಬ್ ಬೆಂಗಳೂರು ಸೌತ್ ಎಂಡ್‌ನ ಜಿಲ್ಲಾ ಗವರ್ನರ್ ಶ್ರೀ ಶ್ರಿಧರ್ ಬಿ.ಆರ್. ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. “1857ರ ಸಿಪಾಯಿ ದಂಗೆ ಇಂದಿನಿಂದ 1947ರ ವಿಜಯದವರೆಗೆ ನಡೆದ ಹೋರಾಟ ಭಾರತೀಯರ ಅಸಮರ್ಪಿತ ಸಂಕಲ್ಪದ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಗಳನ್ನು ಅರಿತು ಆತ್ಮವಿಶ್ವಾಸ ಬೆಳೆಸಿಕೊಂಡರೆ ವೈಯಕ್ತಿಕ ಹಾಗೂ ರಾಷ್ಟ್ರೀಯ ಬೆಳವಣಿಗೆ ಸಾಧ್ಯ,” ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳು, ನೃತ್ಯ, ಘೋಷಣೆ ಪಠಣಗಳ ಮೂಲಕ ರಾಷ್ಟ್ರಪ್ರೇಮವನ್ನು ವ್ಯಕ್ತಪಡಿಸಿದರು. ಕಾಲೇಜು ಆಯೋಜಿಸಿದ್ದ ಕ್ವಿಜ್ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ಅತಿಥಿಗಳು ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಚ್.ಎಸ್. ತಿಮ್ಮಪ್ಪ ವಿತರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಗಾಯನದೊಂದಿಗೆ ಎಲ್ಲರೂ ದೇಶಭಕ್ತಿಯ ಭಾವದಲ್ಲಿ ಒಂದಾಗಿದರು.