ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು ಎಂ ಆಯ್ಕೆಯಾಗಿದ್ದಾರೆ. ಶನಿವಾರ ಮುಕ್ತಾಯಗೊಂಡ ಚುನಾವಣೆಯಲ್ಲಿ ನರಸಿಂಹಲು ಅವರು ವಜ್ರೇಶ್ವರಿ ಚಿತ್ರಮಂದಿರದ ಮಾಲೀಕ ಆರ್.ಸುಂದರ್ ರಾಜು ವಿರುದ್ಧ ಜಯಗಳಿಸಿದ್ದಾರೆ. ಗೋವಿಂದು ಬಣಕ್ಕೆ ಮತ್ತೆ ಗೆಲುವು ಸಿಕ್ಕಂತಾಗಿದೆ.
ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ವಲಯಗಳಿಂದ ವಿವಿಧ ಸ್ಥಾನಗಳಿಗಾಗಿ ಒಟ್ಟು 104 ಅಭ್ಯರ್ಥಿಗಳು ಕಣದಲ್ಲಿದ್ದರು. ಅಧ್ಯಕ್ಷ ಸ್ಥಾನ ಈ ಬಾರಿ ಪ್ರದರ್ಶಕ ವಲಯಕ್ಕೆ ಮೀಸಲಾಗಿತ್ತು. ಅಧ್ಯಕ್ಷರಾಗಿ ನರಸಿಂಹಲು ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ನಿರ್ಮಾಪಕ ವಲಯದಿಂದ ಸಫೈರ್ ವೆಂಕಟೇಶ್, ವಿತರಕ ವಲಯದಿಂದ ಶಿಲ್ಪಾ ಶ್ರೀನಿವಾಸ್, ಪ್ರದರ್ಶಕ ವಲಯದಿಂದ ರಂಗಪ್ಪ ಆಯ್ಕೆಗೊಂಡಿದ್ದಾರೆ. ಇದೇ ವೇಳೆ, ಗೌರವ ಕಾರ್ಯದರ್ಶಿಯಾಗಿ ನಿರ್ಮಾಪಕ ಪ್ರವೀಣ್ ಕುಮಾರ್, ವಿತರಕ ಎಂ.ಎನ್.ಕುಮಾರ್, ಪ್ರದರ್ಶಕ ಕುಶಾಲ್ ಆಯ್ಕೆಯಾಗಿದ್ದಾರೆ.
ಪ್ರತಿಷ್ಠೆಯ ಅಖಾಡವಾಗಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಸಾ.ರಾ.ಗೋವಿಂದು ಮತ್ತು ಭಾಮಾ ಹರೀಶ್ ಬಣಗಳ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಆಯ್ಕೆಯಾದವರಲ್ಲಿ ಬಹುಪಾಲು ಮಂದಿ ಸಾ.ರಾ.ಗೋವಿಂದು ಬಣಕ್ಕೆ ಸೇರಿದವರೆನ್ನಲಾಗಿದೆ.