ಬೆಂಗಳೂರು; ದೇಶದ ಅಧಿಕಾರಿ ಸಮೂಹದಲ್ಲಿ ‘ಟೆಕ್ ಮೌದ್ಗಿಲ್’ ಎಂದೇ ಖ್ಯಾತರಾಗಿರುವ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರು ಇದೀಗ ರಾಜ್ಯದ ಜನರ ಪಾಲಿಗೆ ಮತ್ತಷ್ಟು ಜನಸ್ನೇಹೀ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಸಕ್ತ ರಾಜ್ಯ ಸರ್ಕಾರದ ಎಸ್.ಎಸ್.ಎಲ್.ಆರ್. ಆಯುಕ್ತರಾಗಿರುವ ಮುನೀಶ್ ಮೌದ್ಗಿಲ್ ಅವರು, ಜಮೀನು ಸಂಬಂಧಿತ ಮಹತ್ವದ ದಾಖಲೆಗಳನ್ನು ಆನ್ಲೈನ್ ಮೂಲಕ ಪಡೆಯುವ ವ್ಯವಸ್ಥೆಯನ್ನು ಸಾಕಾರಗೊಳಿಸಿದ್ದಾರೆ.
11E, ಫೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತ್ ಮತ್ತು ಇತರ ನಕ್ಷೆಗಳ ಮುದ್ರಣ ಮತ್ತು ನಾಗರಿಕರ ಅರ್ಜಿಗಳ ಸ್ಥಿತಿಯನ್ನು ONLINE ಮೂಲಕ ಪಡೆಯುವ ವ್ಯವಸ್ಥೆಗೆ ಅವರು ಮುನ್ನುಡಿ ಬರೆದಿದ್ದಾರೆ.
ಏನಿದು ವ್ಯವಸ್ಥೆ..?
ಜಮೀನು ಅಥವಾ ನಿವೇಶನ ಮಾಲೀಕರು ತಮ್ಮ ಸ್ವತ್ತಿನ ದಾಖಲೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಿತ್ತು. ಅಥವಾ ಮಧ್ಯವರ್ತಿಗಳ ಮೊರೆಹೋಗಬೇಕಿತ್ತು. ಜನರ ಈ ಅಲೆದಾಟದ ಸಂಕಟಕ್ಕೆ ಇತಿಶ್ರೀ ಹಾಕಲು ಮುಂದಾದ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಈ ಇಲಾಖೆಗೆ ನಿಯುಕ್ತಿಯಾದಾಗಲೇ ಕಂಪ್ಯೂಟರೀಕರಣದ ಪ್ರಯತ್ನಕ್ಕೆ ನಾಂದಿ ಹಾಡಿದ್ದರು. ಕೆಲವು ವರ್ಷಗಳ ಪ್ರಯತ್ನದಲ್ಲಿ ಅವರು ಸಫಲರಾದರು. ಈ ವ್ಯವಸ್ಥೆಯಿಂದಾಗಿ ಇಲಾಖಾ ಅಧಿಕಾರಿಗಳ ಹಾಗೂ ನೌಕರರ ಕ್ಷಮತೆಯೂ ಉತ್ತಮವಾಯಿತು. ಈ ಕ್ರಮ ರಾಷ್ಟ್ರೀಯ ಮಟ್ಟದಲ್ಲೂ ಶ್ಲಾಘನೆಗೂ ಪಾತ್ರವಾಯಿತಲ್ಲದೆ ಈ ಅಧಿಕಾರಿ ‘ಟೆಕ್ ಮೌದ್ಗೀಲ್’ ಎಂದೇ ಖ್ಯಾತರಾದರು.
ಇದೀಗ ಎಸ್.ಎಸ್.ಎಲ್.ಆರ್. ಆಯುಕ್ತರಾದ ಸಂದರ್ಭದಲ್ಲಿ ಈ ವ್ಯವಸ್ಥೆಗೆ ಹೈಟೆಕ್ ಸ್ಪರ್ಷ ನೀಡಿದ ಮುನೀಶ್ ಮೌದ್ಗಿಲ್ ಅವರು, ಭೂ ದಾಖಲೆಗಳನ್ನು ಸಾರ್ವಜನಿಕರೇ ಆನ್ಲೈನ್ ಮೂಲಕ ಪಡೆಯುವಷ್ಟರ ಮಟ್ಟಿಗೆ ಕಾರ್ಯಸಾಧನೆ ಮಾಡಿ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.
11E, ಫೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತ್ ಮತ್ತು ಇತರ ನಕ್ಷೆಗಳ ಮುದ್ರಣ ಮತ್ತು ನಾಗರಿಕರ ಅರ್ಜಿಗಳ ಸ್ಥಿತಿಯನ್ನು ONLINE ಮೂಲಕ ಪಡೆಯುವ ವ್ಯವಸ್ಥೆಗೆ ಅವರು ಮುನ್ನುಡಿ ಬರೆದಿದ್ದಾರೆ.
ಅರ್ಜಿ ಸಲ್ಲಿಸುವ ಸಮಯದಲ್ಲಿ, ನಾಗರಿಕರು ಅರ್ಜಿಗಳಿಗೆ ಹಣವನ್ನು ಪಾವತಿಸುತ್ತಾರೆ.
ಅವರ ನಕ್ಷೆಯನ್ನು ಅನುಮೋದಿಸಿದ ತಕ್ಷಣ, http://103.138.196.154/service19/Report/ApplicationDetails ವೆಬ್ಸೈಟ್ ಲಿಂಕ್ನಲ್ಲಿ ಅದು ಮುದ್ರಿಸಲು ಲಭ್ಯವಿರುತ್ತದೆ. ಅದೇ ವೆಬ್ಸೈಟ್ ಲಿಂಕ್ನಲ್ಲಿ ಯಾವುದೇ ಸಮಯದಲ್ಲಿ ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿಯನ್ನು ಕೂಡಾ ತಿಳಿದುಕೊಳ್ಳಬಹುದು ಎಂದು ಮುನೀಶ್ ಮೌದ್ಗಿಲ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ನಾಗರಿಕರು ಈಗಾಗಲೇ ಪಾವತಿಯನ್ನು ಮಾಡಿರುವುದರಿಂದ, ಆನ್ಲೈನ್ ಸ್ಕೆಚ್ಗಳನ್ನು ಮುದ್ರಿಸಲು ಯಾವುದೇ ಹೆಚ್ಚುವರಿ ಪಾವತಿಯನ್ನು ಮಾಡಬೇಕಾಗಿಲ್ಲ. ಅಷ್ಟೇ ಅಲ್ಲ, ತಮ್ಮ ನಕ್ಷೆಗಳ ಪ್ರಿಂಟ್ ಔಟ್ ಪಡೆಯಲು ಸರ್ವೆ ಕಚೇರಿಗಳಿಗೆ ಹೋಗಬೇಕಾದ ಅಗತ್ಯವೂ ಇಲ್ಲ. ಆನ್ಲೈನ್ನಲ್ಲಿ ಅಪ್ಲಿಕೇಶನ್ಗಳ ಸ್ಥಿತಿಯನ್ನು ಸಹ ನೋಡಬಹುದು ಎಂದವರು ತಿಳಿಸಿದ್ದಾರೆ.