ಬೆಂಗಳೂರು : ಮೂಡಾದಲ್ಲಿ ಕಾನೂನು ಪ್ರಕಾರ ಪರಿಹಾರ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸಿಎಂ ಕುಟುಂಬದ ಬೆನ್ನಿಗೆ ನಿಂತಿದೆ.
ಮೈಸೂರು ನಗರಾಭಿವೃದ್ಧಿ ಪ್ರಧಿಕಾರ (ಮೂಡಾ) ಅವ್ಯವಹಾರ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ಹಗರಣದಲ್ಲಿ ಸಿಎಂ ಕುಟುಂಬದ ಪಾತ್ರವಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಮುಡಾ ಅಕ್ರಮದ ದಾಖಲೆಗಳನ್ನು ನಾಶ ಮಾಡಲಾಗುತ್ತಿದೆ, ಹಗರಣ ಮುಚ್ಚಿ ಹಾಕಲಾಗುತ್ತಿದೆ ಎನ್ನುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, “ಯಾರು ಯಾವುದನ್ನು ಮುಚ್ಚಿ ಹಾಕಬೇಕಾಗಿಲ್ಲ. ಇಲ್ಲಿ ಯಾವುದೇ ಅನ್ಯಾಯವೂ ಆಗಿಲ್ಲ. ಆಸ್ತಿ ಕಳೆದುಕೊಂಡವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಮುಡಾ ನಿಯಮದಂತೆ ಪರಿಹಾರ ನೀಡಲಾಗುತ್ತದೆ. ಬಿಡಿಎನಲ್ಲಿ ಶೇ 60:40 ಅನುಪಾತ ಇದ್ದು ಮೂಡಾದಲ್ಲಿ 50:50 ಅನುಪಾತದಲ್ಲಿ ಪರಿಹಾರ ನೀಡುವಂತೆ ಕಾನೂನು ಮಾಡಿಕೊಂಡಿದ್ದಾರೆ. ಹೀಗಾಗಿ ಕಾನೂನು ಪ್ರಕಾರವೇ ಪರಿಹಾರ ನೀಡಲಾಗಿದೆ. ಸಿಎಂ ಅವರು ಚುನಾವಣಾ ಅಫಿಡವಿಟ್ ನಲ್ಲಿ ತಮ್ಮ ಪತ್ನಿಗೆ ಬಂದಿರುವ ಆಸ್ತಿಗಳ ಬಗ್ಗೆ ಹೇಳಿದ್ದಾರೆ ಎಂದು ತಿಳಿಸಿದರು.
2010 ರಲ್ಲೇ ಆಸ್ತಿ ಬಂದಿದ್ದರೂ ಸಿಎಂ ಅವರು 2013 ರ ಅಫಿಡವಿಟ್ ನಲ್ಲಿ ಈ ಮಾಹಿತಿ ನಮೂದಿಸಿಲ್ಲ ಎಂದು ಮಾಧ್ಯಮದವರು ಮರುಪ್ರಶ್ನಿಸಿದಾಗ, “ಅದು ನನಗೆ ಗೊತ್ತಿಲ್ಲ. ಈ ಬಾರಿಯ ಅಫಿಡವಿಟ್ ನಲ್ಲಿ ಈ ಎಲ್ಲ ಮಾಹಿತಿಯಿದೆ. ಬಿಜೆಪಿ ಸರ್ಕಾರ ಇದ್ದಾಗಲೇ ಅವರಿಗೆ ಪರಿಹಾರ ನೀಡಲಾಗಿದೆ. ಈಗ ಬಿಜೆಪಿಯವರು, ದಳದವರು ರಾಜಕಾರಣ ಮಾಡುತ್ತಿದ್ದಾರೆ. ಪಾಪ ದಳದವರಂತೂ ಈಗ ಇದ್ದಕ್ಕಿದ್ದಂತೆ ಬಹಳ ಅನುಕಂಪ ತೋರಿಸುತ್ತಿದ್ದಾರೆ” ಎಂದು ಕುಟುಕಿದರು.