ಜನನಾಯಕನ ಕೆಲಸ ಕಂಡು ಬಡಪಾಯಿಗಳು ಪುಳಕ.. ಕ್ಷೇತ್ರದ ಜನರ ಸಂತಸ ಕಂಡು ಶಾಸಕ ಭಾವುಕ
ಉಡುಪಿ: ಸದಾ ಒಂದಿಲ್ಲೊಂದು ವಿಭಿನ್ನ ನಡೆಯಿಂದ ಕ್ಷೇತ್ರದ ಯುವಜನರ ಚಿತ್ತ ಸೆಳೆಯುತ್ತಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಇದೀಗ ಆಟೋ ಚಾಲಕನಾಗಿ ಕಮಾಲ್ ಪ್ರದರ್ಶಿಸಿದ್ದಾರೆ.
ಕಾರ್ಕಳದಲ್ಲಿ ಆಟೋರಿಕ್ಷಾ ಚಾಲಕನಾಗಿ ಆ ಕ್ಷೇತ್ರದಲ್ಲಿ ಕಾಯಕನಿರತ ಯುವಕರಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಆಟೋರಿಕ್ಷಾ ಚಲಾಯಿಸುವ ಮೂಲಕ ಆಟೋ ಚಾಲಕರೇ ನಿಮ್ಮೊಂದಿಗೆ ನಾವಿದ್ದೇವೆ ಎಂದು ಆಟೋ ಚಾಲಕರ ಬೆಂಬಲಕ್ಕೆ ನಿಂತಿದ್ದಾರೆ.
ಮುಡಾರು ಗ್ರಾಮದ ವ್ಯಾಪ್ತಿಯಲ್ಲಿ ಫಲಾನುಭವಿಯೊಬ್ಬರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಆಟೋ ರಿಕ್ಷಾ ಖರೀದಿಗೆ ಸಬ್ಸಿಡಿ ದೊರಕಿತ್ತು. ಆ ಫಲಾನುಭವಿಗೆ ಮುಡಾರು ಗ್ರಾಮ ಪಂಚಾಯತ್ ನ ಕಾರ್ಯಕ್ರಮದಲ್ಲಿ ಶಾಸಕರಾದ ವಿ. ಸುನಿಲ್ ಕುಮಾರ್ ಅವರು ವಾಹನದ ಕೀ ಹಸ್ತಾಂತರಿಸಿದರು.
ಈ ಸಂದರ್ಭದಲ್ಕಿ ಆ ಫಲಾನುಭವಿಯ ಸಂತಸಕ್ಕೆ ಪಾರವೇ ಇರಲಿಲ್ಲ. ಇದನ್ನು ಕಂಡು ಮಂದಹಾಸ ಬೀರಿದ ಶಾಸಕರು ತಾವೂ ಆತನ ಸಂತಸದಲ್ಲಿ ಭಾಗಿಯಾದರು. ಅಷ್ಟೇ ಅಲ್ಲ, ಸ್ವತಃ ತಾವೇ ಆಟೋ ಚಲಾಯಿಸಿ ಆಟೋ ಚಾಲಕರಲ್ಲಿ ಆತ್ಮ ವಿಶ್ವಾಸ ತುಂಬಿದರು.