ಬೆಂಗಳೂರು; ಕೋವಿಡ್ ನಿಯಂತ್ರಣ ಸಹಿತ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜ್ಯದಲ್ಲೇ ಮಾದರಿ ಶಾಸಕರೆನಿಸಿರುವ ಬಂಟ್ವಾಳದ ರಾಜೇಶ್ ನಾಯ್ಕ್, ಇದೀಗ ಬಡವರಿಗೆ ಸೂರು ಕಲ್ಪಿಸುವ ವಿಚಾರದಲ್ಲೂ ಟೊಂಕ ಕಟ್ಟಿ ನಿಂತಿದ್ದಾರೆ.
ಬಂಟ್ವಾಳ ಕ್ಷೇತ್ರದ ಬಡವರಿಗಾಗಿ ಮನೆಗಳ ನಿರ್ಮಾಣ ಯೋಜನೆ ಪ್ರಗತಿಯಲ್ಲಿದೆ. ಈ ಫಲನುಭವಿಗಳಿಗೆ ಸಕಾಲದಲ್ಲೇ ಮನೆಗಳು ಸಿಗುವಂತಾಗಬೇಕಿದೆ. ಹಾಗಾಗಿ ಅನುದಾನ ಬಿಡುಗಡೆ ವಿಳಂಬವಾಗದಂತೆ ರಾಜೇಶ್ ನಾಯ್ಕ್ ಜಾಣ್ಮೆಯ ನಡೆ ಅನುಸರಿಸುತ್ತಿದ್ದಾರೆ. ಈ ಸಂಬಂಧ ವಸತಿ ಸಚಿವ ವಿ. ಸೊಮಣ್ಣ ಮತ್ತು ಶಾಸಕ ರಾಜೇಶ್ ನಾಯ್ಕ್ ನಡುವಿನ ಸಭೆ ಕುತೂಹಲದ ಕೇಂದ್ರಬಿಂದುವಾಯಿತು.
ವಸತಿ ಸಚಿವ ವಿ. ಸೋಮಣ್ಣರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಬೇಟಿ ಮಾಡಿ ಕ್ಷೇತ್ರದಲ್ಲಿ ವಿವಿಧ ವಸತಿ ಯೋಜನೆಯಡಿ ನಿರ್ಮಾಣಗೊಂಡ ಮನೆಗಳ ಅನುದಾನ ಬಿಡುಗಡೆ ಬಗ್ಗೆ ಚರ್ಚಿಸಿದರು. ಕ್ಷೇತ್ರದ ಪ್ರತೀ ಗ್ರಾಮ ಪಂಚಾಯತ್‌ಗೆ ತಲಾ 20 ಮನೆಗಳು ಮತ್ತು ಹೆಚ್ಚುವರಿಯಾಗಿ ಬಂಟ್ವಾಳ ಕ್ಷೇತ್ರಕ್ಕೆ ಮಂಜೂರು ಮಾಡಲಾದ 1333 ಮನೆಗಳ ಕಾಮಗಾರಿ ಪ್ರಗತಿ ಕುರಿತಂತೆ ಹಾಗೂ ಅನುದಾನದ ಕುರಿತಂತೆ ಮಾಹಿತಿ ವಿನಿಮಯ ಮಾಡಿದರು.
ಇದೇ ವೇಳೆ ಯೋಜನೆ ಫಲಪ್ರದವಾಗಲು ಅನುದಾನ ತ್ವರಿತವಾಗಿ ಬಿಡುಗಡೆಯಾಗಬೇಕಿದೆ ಎಂಬ ಮನವಿಯನ್ನು ರಾಜೇಶ್ ನಾಯ್ಕ್ ಅವರು ಸಚಿವರ ಮುಂದಿಟ್ಟರು. ರಾಜೇಶ್ ನಾಯ್ಕ್ ಅವರ ಶಿಫಾರಸು ಬಗ್ಗೆ ಪರಿಶೀಲಿಸಿದ ಸಚಿವ ಸೋಮಣ್ಣ, ಬಂಟ್ವಾಳ ಕ್ಷೇತ್ರದ ಮನೆಗಳಿಗಾಗಿ ಅನುದಾನ ಬಿಡುಗಡೆ ಸಂಬಂಧ ಕೂಡಲೇ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಂಟ್ವಾಳ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಹಾಗೂ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಕೂಡಾ ಸೋಮಣ್ಣ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.