ಉಡುಪಿ: ಕರಾವಳಿ ಪ್ರವಾಸ ಕೈಗೊಂಡ ಮಂತ್ರಿ ಬಿ.ಸಿ.ಪಾಟೀಲ್ ಅವರು ಪೇಚಿಗೆ ಸಿಲುಕಿದ ಪ್ರಸಂಗ ನಡೆದಿದೆ. ಉಡುಪಿ ಸಮೀಪದ ಗ್ರಾಮವೊಂದಕ್ಕೆ ಇಂದು ತೆರಳಿದ ಕೃಷಿ ಸಚಿವರ ಕಾರು ಕೆಸರಿನಲ್ಲಿ ಸಿಲುಕಿಕೊಂಡಿತು. ಈ ಸಂಕಟದ ಸುಳಿಯಿಂದ ಪಾರಾಗಲು ಸಚಿವರು ಪರದಾಡುವಂತಾಯಿತು.
ಉಡುಪಿ ಜಿಲ್ಲೆಯಲ್ಲಿ ಕೇದಾರೋತ್ಥಾನ ಬೇಸಾಯ ಅಭಿಯಾನ ಕುತೂಹಲದ ಕೇಂದ್ರಬಿಂದುವಾಗಿದೆ. ಸುಮಾರು ಎರಡು ಸಾವಿರ ಎಕ್ರೆ ಹಡಿಲು ಜಾಮೀನು ನಾಟಿ ಕಾರ್ಯ ಈ ಅಭಿಯಾನದಲ್ಲಿದೆ. ಇದರಲ್ಲಿ ಭಾಗಿಯಾದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೃಷಿ ಯಂತ್ರವನ್ನು ಪಳಗಿಸಿದ್ದಲ್ಲದೆ, ಗದ್ದೆಯಲ್ಲಿ ನಾಟಿ ಮಾಡಿ ಗಮನಸೆಳೆದರು.
ಇದೇ ಕಾರ್ಯಕ್ರಮ ಅವರ ಪಾಲಿಗೆ ಪರದಾಡುವ ಪರಿಸ್ಥಿತಿ ತಂದೊಡ್ಡಿತು. ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮಕ್ಕೆ ತೆರಳಿದ್ದ ಅವರು ತಮ್ಮದೇ ಅಧಿಕೃತ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಇತ್ತೀಚಿನ ಮಳೆಯಿಂದಾಗಿ ಕರಾವಳಿಯ ಹಲವು ರಸ್ತೆಗಳು ಹಾಳಾಗಿವೆ. ಉಡುಪಿಯ ಕಡೆಕಾರು ಬಳಿ ಅಂತಹಾ ರಸ್ತೆಯಲ್ಲಿ ಸಾಗಿದ ಕೃಷಿ ಸಚಿವರ ಕಾರು ಕೆಸರಲ್ಲಿ ಸಿಲುಕಿತು.
ಎಷ್ಟೇ ಪ್ರಯತ್ನಪಟ್ಟರೂ ಕಾರು ಚಲಿಸಲಾಗಲಿಲ್ಲ. ಈ ವೇಳೆ ಕೃಷಿ ಕಾಯಕದಲ್ಲಿ ನಿರತರಾಗಿದ್ದ ಯುವಕರು ಸಚಿವರ ನೆರವಿಗೆ ಧಾವಿಸಿದರು. ಕಾರನ್ನು ಒಂದಷ್ಟು ದೂರ ದೂಡಿಕೊಂಡು ಸಾಗಿ ಸಚಿವರನ್ನು ಇಕ್ಕಟ್ಟಿನ ಪರಿಸ್ಥಿತಿಯಿಂದ ಪಾರು ಮಾಡಿದರು.
ಹಳ್ಳಿಯಜನರಿಗೆ ಇದು ಮಾಮೂಲು ಪರಿಸ್ಥಿತಿ. ಈ ಕಷ್ಟದ ಸ್ಥಿತಿ ಸಚಿವರಿಗೇ ಎದುರಾಗಿರುವುದು ಅಚ್ಚರಿಯ ಪ್ರಸಂಗ. ಈ ಹಳ್ಳಿ ಸಂಕಟದ ಬಗ್ಗೆ ಅರಿವಾಗುವಷ್ಟರಲ್ಲಿ ಸಚಿವರೇ ಸುಸ್ತಾಗಿಬಿಟ್ಟಿದ್ದರು.