ಕೃಷ್ಣಗಿರಿ (ತಮಿಳುನಾಡು): ಮೇಕೆದಾಟು ವಿಚಾರದಲ್ಲಿ ರಾಜಕೀಯ ಪಕ್ಷಗಳು ಮಾಡದ ಪ್ರಯತ್ನಕ್ಕೆ ರೈತರು ಮುಂದಾಗಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ತಮಿಳುನಾಡು ನೆಲದಲ್ಲೇ ಕರ್ನಾಟಕದ ನಿಲುವನ್ನು ಹೇಳಿ, ತಮಿಳುನಾಡು ರೈತರ ಮನವೊಲಿಸಿದ ವೈಖರಿ ಗಮನಸೆಳೆಯಿತು.
ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ಕುರುಬೂರು ಶಾಂತಕುಮಾರ್ ಅವರ ಮಾತುಗಳು ಕುತೂಹಲದ ಕೇಂದ್ರಬಿಂದುವಾಯಿತು. ಹೆಚ್ಚು ಮಳೆ ಬಂದಾಗ ಕಾವೇರಿ ನೀರು ಸಮುದ್ರಕ್ಕೆ ಹರಿಯುವುದನ್ನು ತಡೆಗಟ್ಟಿ ಎರಡು ರಾಜ್ಯದ ರೈತರು ಬಳಸಿಕೊಂಡರೆ ತಪ್ಪೇನು ಎಂದು ಹೇಳುವ ಮೂಲಕ ಕರ್ನಾಟಕದ ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ರೈತ ನಾಯಕರಿಗೆ ಮನದಟ್ಟು ಮಾಡಿದರು.
ಎರಡು ರಾಜ್ಯಗಳ ರಾಜಕೀಯ ಪಕ್ಷಗಳು ಸರ್ಕಾರಗಳು ರಾಜಕೀಯ ಗೊಂದಲ ಮಾಡಬಾರದು ಇದು ರೈತರ ಬದುಕಿನ ಪ್ರಶ್ನೆಯಾಗಿದೆ ಎಂಬುದನ್ನು ಅರಿತುಕೊಳ್ಳಬೇಕು ಮೇಕೆದಾಟು ಯೋಜನೆ ಸಾಧ್ಯವಾದರೆ
50 ಟಿಎಂಸಿ ನೀರು ಸಂಗ್ರಹಿಸಬಹುದು. ಇಂಥ ಸಂಕಷ್ಟ ಕಾಲದಲ್ಲಿ ಬಳಸಿಕೊಳ್ಳಬಹುದು ಎಂಬುದನ್ನು ನಾವೆಲ್ಲ ಚಿಂತನೆ ಮಾಡಬೇಕಾಗಿದೆ ಎಂದು ಕುರುಬೂರು ಶಾಂತಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವ ವ್ಯಾಪಾರ ಒಪ್ಪಂದ ನೀತಿಯಿಂದ ಕೇಂದ್ರ ಸರ್ಕಾರ ಆಮದು ಸುಂಕ ವಿನಾಯಿತಿ ನೀಡಿದ ಕಾರಣ ಮಲೇಶಿಯಾ ದೇಶದಿಂದ ತಾಳೆ ಎಣ್ಣೆ ಆಮದು ಚೀನಾ ದೇಶದಿಂದ ರೇಷ್ಮೆ ಆಮದು ಮಾಡಿಕೊಂಡ ಕಾರಣ ದೇಶದ ತೆಂಗು ಬೆಳೆಗಾರರು ಹಾಗೂ ರೇಷ್ಮೆ ಬೆಳೆಗಾರರು ಬೆಲೆ ಕುಸಿತದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದೂ ಅವರು ಹೇಳಿದರು.
ತೆಲಂಗಾಣ ರಾಜ್ಯದ ನರಸಿಂಹ ನಾಯ್ಡು, ತಮಿಳುನಾಡಿನ ರೈತ ಮುಖಂಡ
ರಾಮನ್ ಗೌ೦ಡರ ಸಹಿತ ವಿವಿಧ ರಾಜ್ಯಗಳ ರೈತ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.