ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಖಾದ್ರಿಯಾ ಮಸೀದಿ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗಲಿದೆ. ‘ಮಸೀದಿ ದರ್ಶನ’ ಹೆಸರಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಸಾರ್ವಜನಿಕರ ಕುತೂಹಲದ ಕೇಂದ್ರಬಿಂದುವಾಗಿದೆ.
ಬೆಂಗಳೂರಿನ ಬೆನ್ಸನ್ ಟೌನ್ ಬಳಿಯ ಮಿಲ್ಲರ್ಸ್ ರಸ್ತೆಯಲ್ಲಿರುವ ಐತಿಹಾಸಿಕ ಧಾರ್ಮಿಕ ಕೇಂದ್ರ ‘ಮಸ್ಜಿದ್ ಇ ಖಾದರಿಯ್ಯಾ’ ಈ ವಿಶೇಷ ದರ್ಶನಕ್ಕೆ ಸಾಕ್ಷಿಯಾಗಲಿದೆ. ಸಾವಿರಾರು ಜನರು ಈ ಮಸೀದಿ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಬೆನ್ಸನ್ ಟೌನ್ ಖಾದ್ರಿಯಾ ಮಸೀದಿಯು ಮುಸ್ಲಿಂ ಧರ್ಮದ ಪ್ರಮುಖ ಆರಾಧನ ಸ್ಥಳ. ಮುಸ್ಲಿಮರ ಪವಿತ್ರ ಹಬ್ಬಗಳ ಸಂದರ್ಭಗಳಲ್ಲಿ ವಿಶೇಷ ಉತ್ಸವಗಳು ಇಲ್ಲಿ ನೆರವೇರುತ್ತಿದ್ದು, ಸಾವಿರಾರು ಮಂದಿ ಭಾಗಿಯಾಗುತ್ತಾರೆ. ಇದೇ ಮಸೀದಿಯಲ್ಲಿ ನವೆಂಬರ್ 5ರಂದು ‘ಮಸೀದಿ ದರ್ಶನ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಏನಿದು ಮಸೀದಿ ದರ್ಶನ..?
ಮಸೀದಿಯಲ್ಲಿನ ಕೈಂಕರ್ಯಗಳಲ್ಲಿ ಮುಸ್ಲಿಮರು ಭಾಗವಹಿಸುತ್ತಾರಷ್ಟೇ. ಅನ್ಯ ಧರ್ಮೀಯರ ಪಾಲ್ಗೊಳ್ಳುವಿಕೆ ವಿರಳ. ಆದರೆ, ಈ ‘ಮಸೀದಿ ದರ್ಶನ’ ಕಾರ್ಯಕ್ರಮ ಆಯೋಜಿತವಾಗುವ ಸಂದರ್ಭದಲ್ಲಿ ಈ ಪ್ರಾರ್ಥನಾ ಕೇಂದ್ರದ ಎಲ್ಲಾ ಸ್ಥಳಗಳಿಗೂ ಭೇಟಿ ನೀಡುವ ಅವಕಾಶ ಸಾರ್ವಜನಿಕರಿಗೆ ಸಿಗುತ್ತದೆ. ಬೆನ್ಸನ್ ಟೌನ್ ಬಳಿ ಮಿಲ್ಲರ್ಸ್ ರಸ್ತೆಯಲ್ಲಿರುವ ಖಾದರಿಯ್ಯಾ ಮಸೀದಿಯಲ್ಲಿ ನ.5ರಂದು ‘ಮಸೀದಿ ದರ್ಶನ’ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸರ್ವ ಧರ್ಮೀಯರಿಗೆ ಸಿಕ್ಕಿದೆ.
ಸಾರ್ವಜನಿಕರಿಗೆ ಮಸೀದಿ ಪರಿಚಯಿಸುವ ಕಾರ್ಯಕ್ರಮ ಇದಾಗಿದ್ದು, ಬೆಂಗಳೂರಿನ ವಿದ್ಯಾರ್ಥಿ – ಯುವಕರ ತಂಡವು ಪ್ರವಾದಿ ಮುಹಮ್ಮದರ ಜನ್ಮ ದಿನಾಚರಣೆ ಪ್ರಯುಕ್ತ ‘ಪ್ರವಾದಿ ಮುಹಮ್ಮದ್ (ಸ) – ಸರ್ವ ಮಾನವರಿಗಾಗಿ’ ಎಂಬ ಹೆಸರಿನಲ್ಲಿ ಅಭಿಯಾನವನ್ನು ನಡೆಸುತ್ತಿದೆ. ಇದರ ಅಂಗವಾಗಿ ‘ಮಸೀದಿ ದರ್ಶನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಐತಿಹಾಸಿಕ ಮಸೀದಿಯೊಳಗಿನ ಪ್ರಾರ್ಥನಾ ಸ್ಥಳ, ಧಾರ್ಮಿಕ ಮುಖಂಡರು ಸಮಾಗಮವಾಗುವ ಕೇಂದ್ರ, ಪ್ರವಚನಾ ಸ್ಥಳ ಸಹಿತ ಧಾರ್ಮಿಕ ಸೂಕ್ಷ್ಮ ಕೇಂದ್ರಗಳ ಬಗ್ಗೆ ತಿಳಿಯುವ ಅವಕಾಶ ಎಲ್ಲಾ ಧರ್ಮೀಯರಿಗೂ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಖಾದರಿಯ್ಯಾ ಮಸೀದಿಯೊಳಗೆ ಸುತ್ತಾಡುವ ಅವಕಾಶವಷ್ಟೇ ಅಲ್ಲ, ಪ್ರಾರ್ಥನೆಯ ವಿಧಿವಿಧಾನಗಳನ್ನೂ ನೋಡಬಹುದಾಗಿದೆ. ವಿಶೇಷ ವಸ್ತು ಪ್ರದರ್ಶನವೂ ಆಯೋಜಿಸಲಾಗಿದೆ. ಅಷ್ಟೇ ಅಲ್ಲ, ಮಸೀದಿ ಕುರಿತ ಕುತೂಹಲಕಾರಿ ವಿಚಾರಗಳನ್ನು ತಿಳಿಯಬಯಸುವವರಿಗಾಗಿ ಪ್ರಶ್ನೋತ್ತರ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಎಂದು ಪ್ರಮುಖರು ಮಾಹಿತಿ ಹಂಚಿಕೊಂಡಿದ್ದಾರೆ.
























































