ಮಂಗಳೂರು: ವೇಗವಾಗಿ ಬೆಳೆಯುತ್ತಿರುವ ರಾಜ್ಯದ ಬಂದರು ನಗರಿ ಮಂಗಳೂರಿನ ದುಸ್ಥಿತಿ ಇದು. ಅಭಿವೃದ್ಧಿಯ ಹೆಸರಲ್ಲಿ ಇಲ್ಲಿ ನಡೆದಿರುವುದಾದರೂ ಏನು? ಸರ್ಕಾರ ತಪ್ಪು ಮಾಡಿದರೂ ಅದನ್ನು ತಿದ್ದಬೇಕಾದ ಆಡಳಿತ ಪಕ್ಷದ ದಂಡನಾಯಕನ ಊರಲ್ಲಿ ನಡೆದ ಕಾಮಗಾರಿ ಹೇಗಿದೆ ಎಂಬುದಕ್ಕೆ ಈ ರಸ್ತೆಯೇ ಉದಾಹರಣೆ.
ಇದು ಮಂಗಳೂರು ನಗರದ ಕಣ್ಣ ಗುಡ್ಡೆ ಎಂಬ ಪ್ರದೇಶ. ಇಲ್ಲಿ ಕಾಣುವ ರಸ್ತೆಯು ಮೊದಲು ಗದ್ದೆಯಾಗಿತ್ತು. 2021 ರ ಜನವರಿ ತಿಂಗಳಲ್ಲಿ ಮಣ್ಣು ಹಾಕಿ ಫೆಬ್ರವರಿಯಲ್ಲಿ ಡಾಮರೀಕರಣವಾಗಿದೆ. ಆದರೆ ಅವೈಜ್ಞಾನಿಕ ರೀತಿಯಲ್ಲಿ ತರಾತುರಿಯಲ್ಲಿ ಕಾಮಗಾರಿ ನಡೆದರೆ ಮುಂದೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ ಎಂಬಂತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ರಸ್ತೆ ಅವಾಂತರ ಒಂದೆರಡು ಬಾರಿಯದ್ದಲ್ಲ ಒಮ್ಮೆ ನಡೆದ ಕಾಮಗಾರಿ ಕಳಪೆ ಎಂದು ಗೊತ್ತಾದ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಡಾಮರೀಕರಣ ಮಾಡಲಾಗಿತ್ತೆಂದು ಸ್ಥಳೀಯರು ದೂರುತ್ತಿದ್ದಾರೆ. ಇದೀಗ ಎರಡನೇ ಬಾರಿಗೆ ಮಾಡಿದ ಕಾಮಗಾರಿ ನಂತರದ ಅವಸ್ಥೆ ಈ ರೀತಿ ಇದೆ.
ಇಲ್ಲಿ ಗದ್ದೆಗೆ ಮಣ್ಣು ಹಾಕಿ, ಆ ಕೂಡಲೇ ಡಾಮರ್ ಹಾಕಲಾಗಿದೆಯಂತೆ. ಈ ರೀತಿ ಕಾಮಗಾರಿ ನಡೆಸಿದರೆ ಮಳೆಗಾಲದಲ್ಲಿ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಬಹುದೆಂಬ ಕನಿಷ್ಠ ಜ್ಞಾನವೂ ಸಂಬಂಧಪಟ್ಟ ಗುತ್ತಿಗೆದಾರರಿಗೆ, ಇಂಜಿನಿಯರ್‌ಗಳಿಗೆ ತಿಳಿದಿಲ್ಲವೇ? ಎಂದು ಮಂಗಳೂರಿನ ಪ್ರಜ್ಞಾವಂತರು ಪ್ರಶ್ನಿಸಿದ್ದಾರೆ.
ಇದೀಗ ಈ ಕಾಮಗಾರಿ ನಿರ್ವಹಿಸಿರುವ ಇಂಜಿನಿಯರ್ ಯಾರು ಎಂಬ ಬಗ್ಗೆ ಸಾರ್ವಜನಿಕರಿಗೆ ಕುತೂಹಲವಂತೆ. ಈ ಕಾಮಗಾರಿ ಬಗ್ಗೆ ಪಾಲಿಕೆ ಅಧಿಕಾರಿಗಳು ಕೂಡಾ ಪರಾಮರ್ಶೆ ಮಾಡಿರಬಹುದೇ ಎಂಬ ಸಂಶಯವೂ ಹಲವರದ್ದು.
ಇದಕ್ಕೆ ಖರ್ಚು ಮಾಡಿರುವ ದುಡ್ಡು ಯಾರದ್ದು?
ಈ ರೀತಿ ಹಣ ಫೋಲು ಮಾಡಲು ಅಧಿಕಾರ ಕೊಟ್ಟವರು ಯಾರು? ಎಂಬುದು ಸಾರ್ವಜನಿಕರ ಪ್ರಶ್ನೆ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಬಗೆ ಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ವ್ಯವಸ್ಥೆಯ ವಿರುದ್ದ ಹಲವರು ಕಿಡಿಕಾರಿದ್ದಾರೆ.
ನಳಿನ್ ಏನನ್ನುತ್ತಾರೆ?
ಕಳಪೆ ಕಾಮಗಾರಿ ಮೂಲಕ ಭ್ರಷ್ಟಾಚಾರ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತದ ಮಂತ್ರ ಪಠಿಸುತ್ತಿರುವ ಪ್ರಧಾನಿ ಮೋದಿಯವರ ಜೊತೆ ಗುರುತಿಸಿಕೊಂಡಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಈ ಬಗ್ಗೆ ಯಾವ ಕ್ರಮ ಅನುಸರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎನ್ನುತ್ತಿದ್ದಾರೆ ಮಂಗಳೂರಿನ ಜನ.