ಮಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶ ಅಭಿವೃದ್ಧಿಗೆ ಪೂರಕವಾಗಿದ್ದರೂ ಇದರ ಬಗ್ಗೆ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಕಿವಿಗೊಡುವ ಅಗತ್ಯವಿಲ್ಲ. ಸರಕಾರ ಕಲಿಕೆಯಲ್ಲಿ ಸುಧಾರಣೆ ತರುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಸೋಮವಾರದಂದು ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಮೂಡಬಿದರೆಯ ಬನ್ನಡ್ಕದಲ್ಲಿ ಸ್ಥಾಪಿಸಿದ ವಿಶ್ವವಿದ್ಯಾಲಯದ ಪ್ರಥಮ ದರ್ಜೆ ಘಟಕ ಕಾಲೇಜನ್ನು ಅನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ವರ್ತಮಾನ ಭಾರತದ ಅಗತ್ಯವೇನು? ಶೈಕ್ಷಣಿಕವಾಗಿ ದೇಶ ಎದುರಿಸುತ್ತಿರುವ ಸವಾಲುಗಳೇನು? ಎಂಬುದನ್ನು ಅರಿತು ಸಮಾಜ ಹಾಗೂ ರಾಷ್ಟ್ರೀಯ ಸುಧಾರಣೆಯ ನಿಟ್ಟಿನಲ್ಲಿ ಈ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಆದರೆ ಕೆಲವರು ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆಂದು ಸಚಿವರು ದೂರಿದರು.
ನೂತನ ಶಿಕ್ಷಣ ನೀತಿ ವಿದ್ಯಾರ್ಥಿ ಸ್ನೇಹಿ ಹಾಗೂ ವಿದ್ಯಾರ್ಥಿ ಕೇಂದ್ರಿತವಾಗಿದೆ. ಒಂದು ಮಾತಿನಲ್ಲಿ ಹೇಳುವುದಾದರೆ ಭವಿಷ್ಯದ ಭಾರತದ ಎಲ್ಲ ಅಗತ್ಯಗಳನ್ನು ಪೂರೈಸುವ ಪರಿಣಾಮಕಾರಿ ಅಂಶಗಳೆಲ್ಲವೂ ಇದರಲ್ಲೇ ಅಡಕವಾಗಿವೆ ಎಂದು ಅವರು ನುಡಿದರು.
ಕಳೆದ ಅಗಸ್ಟ್ ೧೫ರಂದು ನಾವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸಿದ್ದೇವೆ. ದೇಶದ ಶತಮಾನೋತ್ಸವದ ಸಂದರ್ಭದಲ್ಲಿ ವಿಶ್ವಕ್ಕೆ ವಿಶ್ವ ಗುರುವಾಗಬೇಕಾದರೆ ಈ ನೀತಿನ್ನು ಆಮೂಲಾಗ್ರವಾಗಿ ಜಾರಿ ಮಾಡಲೇಬೇಕಿದೆ ಎಂದರು.