ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ಸಿಕ್ಕಿದೆ. ಮೈಸೂರು ವೈಭವದಂತೆಯೇ ನಾಡಿನ ಗಮನಸೆಳೆದಿರುವ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಅಡ್ಡೂರು ದಸರಾ ನೆರವೇರುತ್ತಿದೆ. ಈ ಮಹಾವೈಭವಕ್ಕೆ ತಾಸೆ ಮತ್ತು ಡೋಲು ಬಡಿಯುವ ಮೂಲಕ ತುಳುನಾಡಿನ ಶೈಲಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ನವಮಂಗಳೂರು ಬಂದರು ಪ್ರಾಧಿಕಾರ (ಎನ್ಎಂಪಿಎ) ಅಧ್ಯಕ್ಷ ಡಾ.ಎ.ವೆಂಕಟರಮಣ ಅಕ್ಕರಾಜು, ದಸರಾವು ಹಬ್ಬ ಮಾತ್ರವಲ್ಲ, ನಂಬಿಕೆ, ಸಂಸ್ಕೃತಿ ಹಾಗು ಒಗಟ್ಟಿನ ಪ್ರತೀಕ. ಕುದ್ರೋಳಿಯಲ್ಲಿ ನಡೆಯುತ್ತಿರು ಈ ಉತ್ಸವ ಮಂಗಳೂರನ್ನು ಮತ್ತಷ್ಟು ವಿಭಿನ್ನವಾಗಿಸಿದೆ ಎಂದರು. ಮಂಗಳೂರು ದಸರಾ ಮೈಸೂರ ದಸರಾದಷ್ಟೇ ಪ್ರಸಿದ್ಧಿ ಪಡೆದಿದೆ. ಭಾರತೀಯ ಧರ್ಮ, ಸಂಸ್ಕೃತಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜನರಲ್ ಮ್ಯಾನೇಜರ್ ಹಾಗೂ ಮಂಗಳೂರು ವಲಯ ಮುಖ್ಯಸ್ಥ ರಾಜೇಂದರ್ ಕುಮಾರ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಪ್ರಾದೇಶಿಕ ಕಚೇರಿ ಮುಖ್ಯಸ್ಥ ಆರ್. ನರಸಿಂಹ ಕುಮಾರ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಕಿಶೋರ್ ದಂಡೆಕೇರಿ, ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸದಸ್ಯರಾದ ಲೀಲಾಕ್ಷ ಕರ್ಕೇರ, ರಮಾನಾಥ ಕಾರಂದೂರು, ವಾಸುದೇವ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಸ್ವಾಗತಿಸಿದರು. ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು.
ದಸರಾ ಸೇವಾ ಸಿರಿ ಪ್ರಶಸ್ತಿ:
ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಸಾನಿಧ್ಯ ವಿಶೇಷ ಶಾಲೆ ಮಂಗಳೂರು, ವೈಟ್‌ಡೌಸ್ ಮಂಗಳೂರು, ಎಂ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್‌ನ ಸೇವೆಯನ್ನು ಗುರುತಿಸಿ ದಸರಾ ಸೇವಾ ಸಿರಿ ಪ್ರಶಸ್ತಿ-2025 ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ವೈಭವ:
ಸೋಮವಾರ ವಿದುಷಿ ವಿನುತಾ ಲಕ್ಷ್ಮೀಕಾಂತ್ ಜೋಗಿ ಕದ್ರಿ ಮತ್ತು ಬಳಗದವರಿಂದ ಭರತನಾಟ್ಯ, ಕಲಾಮೃತ ಮಂಗಳೂರು ತಂಡದಿಂದ ನಾಟ್ಯಸಂಭ್ರಮ, ಉಡುಪಿಯ ವಿದ್ವಾನ್ ಸುಧೀರ್ ರಾವ್, ವಿದುಷಿ ಮಾನಸಿ ಸುಧೀರ್ ನೇತೃತ್ವದ ನೃತ್ಯನಿಕೇತನ ಕೊಡವೂರು ಕಲಾವಿದರ ನೃತ್ಯರೂಪಕ ನಾರಸಿಂಹ (ಒಳಿತಿನ ವಿಜಯದ ಕಥನ) ಗಮನಸೆಳೆಯಿತು.