ಮಂಗಳೂರು:ಒಂದೊಮ್ಮೆ ಭೂಗತ ಪಾತಕಿಗಳ ಕಾರಸ್ಥಾನ ಎಂದೇ ಗುರುತಾಗಿದ್ದ ಕರಾವಳಿ ಇದೀಗ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ಇತ್ತೀಚಿನ ದಿನಗಳಲ್ಲಿ ಶಾಂತವಾಗಿದ್ದ ಮಂಗಳೂರಿನಲ್ಲಿ ರೌಡಿಪಡೆಯ ಅಟ್ಟಹಾಸ ಜನರ ಆತಂಕಕ್ಕೆ ಕಾರಣವಾಗಿದೆ.
ರೌಡಿಶೀಟರ್ ಮೇಲೆ ಮಾರಕಾಸ್ತ್ರಗಳಿಂದ ನಡೆದ ದಾಳಿ ಪೊಲೀಸರಿಗೂ ಸವಾಲೆಂಬಂತಾಗಿದೆ.
ಮಂಗಳೂರು ಹೊರವಲಯದ ಕಾಟಿಪಳ್ಳ ಎಂಬಲ್ಲಿ ಇಂದು ಪುಂಡರ ಗುಂಪೊಂದು ಮಚ್ಚು ಲಾಂಗ್ ಝಳಪಿಸಿದ್ದು, ಎದುರಾಳಿ ಗುಂಪಿನ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಜನ ಡಟ್ಟನೆಯ ಪ್ರದೇಶದಲ್ಲೇ ರೌಡಿ ಗುಂಪು ಈ ಪುಂಡಾಟ ನಡೆಸಿದೆ.
ಕಾಟಿಪಳ್ಳದ ರೌಡಿಶೀಟರ್ ಪಿಂಕಿ ನವಾಸ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಎದುರಾಳಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಪಿಂಕಿ ನವಾಸ್ ಯತ್ನಿಸಿದ್ದಾನೆ. ಆದರೆ ಆ ವೇಳೆ ರೌಡಿಗಳು ಆತನನ್ನು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿದ್ದ ಪಿಂಕಿ ನವಾಸ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ರೌಡಿಗಳಿಂದ ಹಲ್ಲೆಗೊಳಗಾದ ಪಿಂಕಿ ನವಾಸ್ ಕೆಲ ಸಮಯದ ಹಿಂದೆ ನಡೆದಿದ್ದ ದೀಪಕ್ ರಾವ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿದ್ದು, ದಾಳಿಕೋರ ಪುಂಡರ ಬಂಧನಕ್ಕಾಗಿ ಬಲೆಬೀಸಿದ್ದಾರೆ.