ಬೆಂಗಳೂರು: ಮಂಗಳೂರು ಆಟೋ ರಿಕ್ಷಾ ಸ್ಫೋಟ ಪ್ರಕರಣ ರಾಜ್ಯದಲ್ಲಿ ಭೀತಿಯ ಅಲೆ ಎಬ್ಬಿಸಿದೆ. ಈ ಘಟನೆ ಕುರಿತಂತೆ ತನಿಖೆ ಕೈಗೊಂಡಿರುವ ಪೊಲೀಸರು ಮಹತ್ವದ ಸಂಗತಿಗಳನ್ನು ಬೆಳಕಿಗೆ ತರುತ್ತಿದ್ದಾರೆ. ಪಾತಕಿಗಳ ಹೆಜ್ಜೆ ಜಾಡು ಬೆನ್ನತ್ತಿರುವ ಪೊಲೀಸರು ಅನೇಕರನ್ನು ಖೆಡ್ಡಕ್ಕೆ ಕೆಡವಿದ್ದು, ಇದರ ಜೊತೆಯಲ್ಲೇ ಎನ್‌ಐಎ, ರಾ ಸಹಿತ ವಿವಿಧ ತಂಡಗಳೂ ತನಿಖೆಯ ಅಖಡದಲ್ಲಿ ಕಾರ್ಯಾಚರಣೆ ಕೈಗೊಂಡಿವೆ.
ಮಂಗಳೂರಿನ ನಿಗೂಢ ಸ್ಫೋಟದ ರಹಸ್ಯ ಒಂದು ಕುಕ್ಕರ್‌ನಲ್ಲಿ ಅಡಗಿತ್ತು. ಆ ಸ್ಫೋಟಕ ಸಿಡಿತದ ತೀವ್ರತೆ ಕಡಿಮೆ ಇದ್ದಿದ್ದರಿಂದ ಅದೃಷ್ಟವಶಾತ್ ಜೀವಹಾನಿ ಸಂಭವಿಸಿಲ್ಲ.
ಅಲೋಕ್ ಕುಮಾರ್, ಐಪಿಎಸ್ ಅಧಿಕಾರಿ
ಮಂಗಳೂರು ಘಟನೆ ಕುರಿತಂತೆ ಪೊಲೀಸರು ಉನ್ನತ ಮಟ್ಟದ ತನಿಖೆ ಕೈಗೊಂಡಿದ್ದಾರೆ. ಭಯೋತ್ಪಾದನಾ ನಿಗ್ರಹ ವಿಚಾರದಲ್ಲಿ ಪಾಂಡಿತ್ಯವುಳ್ಳ ಅಧಿಕಾರಿ ಎಂದೇ ಗುರುತಾಗಿರುವ ಎಡಿಜಿಪಿ ಅಲೋಕ್ ಕುಮಾರ್ ಅವರೇ ತನಿಖೆಯ ಅಖಾಡಕ್ಕೆ ಧುಮುಕಿದ್ದು, ಮಂಗಳೂರು ಬ್ಲಾಸ್ಟ್ ಕೇಸ್ ಹಿಂದಿನ ಪಾತಕಿಗಳ ರಹಸ್ಯ ಅಜೆಂಡಾ ಬೆಳಕಿಗೆ ಬರಬಹುದೆಂಬ ವಿಶ್ವಾಸ ಹೆಚ್ಚಿದೆ.
ರಾಜ್ಯದಲ್ಲಿ ಈ ಹಿಂದೆ ಸಂಭವಿಸಿದ್ದ ಬಾಂಬ್ ಸ್ಫೋಟದ ತನಿಖೆಯನ್ನು ಯಶಸ್ವಿಯಾಗಿ ನಡೆಸಿದ್ದರೆಂಬ ಖ್ಯಾತಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರದ್ದು. ಇದೀಗ ಅವರು ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಮುಖ್ಯಸ್ಥರಾಗಿರುವುದರಿಂದ ತಾವೇ ಖುದ್ದಾಗಿ ಮಂಗಳೂರು ಸ್ಫೋಟದ ತನಿಖೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಮಂಗಳೂರಿನ ಈ ಘಟನೆಯ ಬಗ್ಗೆ ಎಲ್ಲಾ ಮಗ್ಗುಲಲ್ಲೂ ಪರಿಶೀಲನೆ ನಡೆಸಲು ಸೂಚಿಸಿರುವ ಅಲೋಕ್ ಕುಮಾರ್, ಈ ಸ್ಫೋಟದ ರೂವಾರಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕ ಇರುವ ರಹಸ್ಯವನ್ನು ಬೇಧಿಸಲು ಮಾರ್ಗದರ್ಶನ ಮಾಡಿದ್ದಾರೆ. ಅಷ್ಟೇ ಅಲ್ಲ, ವಿಧ್ವಂಸಕರು ಮಂಗಳೂರನ್ನೇ ಆಯ್ಕೆ ಮಾಡಿರುವ ಉದ್ದೇಶವನ್ನು ಪತ್ತೆ ಮಾಡುವ ಕಸರತ್ತಿನಲ್ಲೂ ಅವರು ತೊಡಗಿದ್ದಾರೆ.
ಮಂಗಳೂರು ಸ್ಫೋಟ ಪ್ರಕರಣದಿಂದ ನಾವು ಸಾಕಷ್ಟು ಕಲಿಯಬೇಕಿದೆ ಎಂದವರು ಅಭಿಪ್ರಾಯ ಹೇಳಿಕೊಂಡಿದ್ದಾರೆ. ಕೃತ್ಯಕ್ಕೂ ಮುನ್ನ ನಡೆದಿರುವ ಸಂಚು, ಆರೋಪಿಯ ಸಂಶಯಾಸ್ಪದ ನಡೆ, ಅಮಾಯಕರ ಆಧಾರ್ ಕಾರ್ಡ್ ಅಪಬಳಕೆಯ ವಿಚಾರಗಳು ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ಅದನ್ನು ಆಧಾರವಾಗಿಟ್ಟು ಸುರಕ್ಷತೆಯ ಅನಿವಾರ್ಯತೆಯ ವಿಚಾರಗಳನ್ನು ಅವರು ಜನತೆಯ ಮುಂದಿಟ್ಟಿದ್ದಾರೆ.
ಆಧಾರ್ ಕಾರ್ಡನ್ನು ಜೋಪಾನವಾಗಿ ಇಟ್ಟುಕೊಳ್ಳಿ,
ಆಧಾರ್ ಕಾರ್ಡ್‌ಗೆ ಸಂಬಂಧಪಟ್ಟ ಸೈಟ್‌ಗಳು ಅಪಬಳಕೆಯಾಗದಂತೆ ಲಾಕ್ ಅನ್‌ಲಾಕ್ ವಿಚಾರದಲ್ಲಿ ಜಾಗ್ರತೆ ವಹಿಸಿ.
ಬಾಡಿಗೆದಾರರ ವಿಚಾರದಲ್ಲೂ ನಿಗಾ ಇರಲಿ.
ನೆರೆ ಹೊರೆಯಲ್ಲಿನ ಸುವ್ಯವಸ್ಥೆ ಬಗ್ಗೆ ಹೆಚ್ಚು ಗಮನವಿರಲಿ
ಈ ಸಲಹೆಗಳೊಂದಿಗೆ ಎಡಿಜಿಪಿ ಅಲೋಕ್ ಕುಮಾರ್ ಮಾಡಿರುವ ಟ್ವೀಟ್‌ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದನ್ನು ಅನೇಕರು ರಿಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ, ಜಾಗೃತಿ ಅಭಿಯಾನ ರೂಪದಲ್ಲಿ ಹರಿದಾಡುತ್ತಿರುವ ಕಮೆಂಟ್‌ಗಳೂ ಗಮನಸೆಳೆದಿವೆ.