ಮುಂಬಯಿ: ಮಹಾರಾಷ್ಟ್ರ ಬಿಜೆಪಿ ಸಚಿವರ ಕನ್ನಡ ವಿರೋಧಿ ನಡೆ ಕರುನಾಡ ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದ ಗಡಿನಾಡು ಬೆಳಗಾವಿಗೆ ಲಗ್ಗೆ ಹಾಕುವುದಾಗಿ ಮಹಾರಾಷ್ಟ್ರದ ಸಚಿವ ಚಂದ್ರಕಾಂತ ಪಾಟೀಲ್ ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯೂ ಆದ ಬಿಜೆಪಿ ಧುರೀಣ ದೇವೇಂದ್ರ ಫಡ್ನವಿಸ್ ಅವರು ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಉದ್ರೇಕಕಾರಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯಿಂದ ಪ್ರೇರಿತರಾದ ಪುಂಡರು ಕರ್ನಾಟಕದ ಸರ್ಕಾರಿ ಬಸ್ ಮೇಲೆ ದಾಳಿ ಮಾಡಿದ್ದರು. ಇದೀಗ ಮಹಾರಾಷ್ಟ್ರದ ಮತ್ತೊಬ್ಬ ಸಚಿವ ಚಂದ್ರಕಾಂತ್ ಪಾಟೀಲ್ ಅವರ ನಡೆ ಬೆಳಗಾವಿಯಲ್ಲಿನ ಕನ್ನಡಿಗರನ್ನು ಕೆರಳಿಸಿದೆ.
ಡಿಸೆಂಬರ್ 6ರಂದು ಬೆಳಗಾವಿಗೆ ಹೋಗಿಯೇ ತೀರುತ್ತೇನೆ ಎಂದು ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ. ಮುಂಬಯಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೆಳಗಾವಿ ವಿಚಾರ ಕುರಿತಂತೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರೂ ಆಗಿರುವ ಚಂದ್ರಕಾಂತ್ ಪಾಟೀಲ್, ಪ್ರಸ್ತುತ ಪರಿಸ್ಥಿತಿಯಲ್ಲಿ ಗಡಿ ವಿವಾದವನ್ನು ಮುಂದಿಟ್ಟು ಬೆಳಗಾವಿಗೆ ಬರಬೇಡಿ ಎಂಬ ಕರ್ನಾಟಕದ ಮನವಿಯನ್ನು ಒಪ್ಪಿಕೊಳ್ಳಲು ತಾವು ತಯಾರಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಯಾರಿಗೂ ಹೆದರಲ್ಲ, ಬೆಳಗಾವಿಗೆ ತೆರಳಿ ಶಿವಾಜಿ, ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವುದಾಗಿ ಹೇಳಿದ್ದಾರೆ.
ಮಹಾರಾಷ್ಟ್ರದ ಬಿಜೆಪಿ ನಾಯಕರ ಈ ನಡೆ ಬೆಳಗಾವಿಯ ಕನ್ನಡ ಮುಖಂಡರನ್ನು ಕೆರಳುವಂತೆ ಮಾಡಿದೆ. ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


















































