ಬೆಂಗಳೂರು – ಮುತ್ಸದ್ಧಿ ರಾಜಕಾರಣಿ, ರೈತ ಹೋರಾಟಗಾರ ಹಾಗೂ ಕಾವೇರಿ ನದಿ ನೀರು ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಜಿ.ಮಾದೇಗೌಡರ ನಿಧನಕ್ಕೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಕಂಬನಿ ಮಿಡಿದಿದ್ದಾರೆ.
ಕಾವೇರಿ ರಕ್ಷಣೆ, ರೈತರ ಹಿತಕ್ಕಾಗಿ ಶ್ರಮಿಸಿದ್ದವರು ಮಾದೇಗೌಡರ ಅವರ ನಿಧನದಿಂದ ಮಂಡ್ಯ ತನ್ನ ಹೆಮ್ಮೆಯ ಪುತ್ರನನ್ನು ಕಳೆದುಕೊಂಡಿದೆ. ನಾಡಿನ ಜೀವನದಿ ಕಾವೇರಿ ಹಾಗೂ ಕನ್ನಡಿಗರ ಹಿತಕ್ಕಾಗಿ ಅಧಿಕಾರವನ್ನು ಲೆಕ್ಕಿಸದೆ ಹೋರಾಟಕ್ಕೆ ಧುಮುಕ್ಕುತ್ತಿದ್ದ ಅವರು ನಮಗೆಲ್ಲರಿಗೂ ಆದರ್ಶಪ್ರಾಯವಾಗಿದ್ದರು. ಅಂತಹ ಧೀಮಂತ ನಾಯಕನ ಆಕಾಲಿಕ ನಿಧನದಿಂದ ಕರುನಾಡು ಬಡವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಮಾದೇಗೌಡರು ಕಾವೇರಿ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದರು. 1962ರಿಂದ ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಿರುಗಾವಲು ಕ್ಷೇತ್ರ ಮಳವಳ್ಳಿ ಕ್ಷೇತ್ರದೊಂದಿಗೆ ಸೇರಿಕೊಂಡ ನಂತರ ಮಂಡ್ಯಕ್ಕೆ ಬಂದರು. 1989, 1995ರಲ್ಲಿ 2 ಬಾರಿ ಲೋಕಸಭಾ ಸದಸ್ಯರಾಗಿದ್ದರು. 1980–83ರವರೆಗೆ ಗುಂಡೂರಾವ್ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾಗಿದ್ದರು
ಎಂದು ಅವರ ಸೇವೆಯನ್ನು ಸ್ಮರಿಸಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ 1989 ಮತ್ತು 1991ರಲ್ಲಿ ಆಯ್ಕೆಗೊಂಡಿದ್ದರು. ಹಿರಿಯ ರಾಜಕಾರಣಿ ಮಾದೇಗೌಡರು ಕಾವೇರಿ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಇತರೆ ಅನೇಕ ರೈತ ಹೋರಾಟಗಳಲ್ಲಿ ಅವರು ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು ಎಂದು ಕೊಂಡಾಡಿದ್ದಾರೆ.
ಒಬ್ಬ ಶ್ರೇಷ್ಠ ಮುತ್ಸದ್ದಿಯನ್ನು ಕಳೆದುಕೊಂಡಿರುವ ಕರುನಾಡಿಗೆ ಮಾದೇಗೌಡರ ನಿಧನ ತುಂಬಲಾರದ ನಷ್ಟವಾಗಿದ್ದು, ದೇವರು ಅವರ ಆತ್ಮಕ್ಕೆ ಶಾಂತಿಯನ್ನು ನೀಡಿ, ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಚಿವ ನಿರಾಣಿ ಅವರು ಪ್ರಾರ್ಥಿಸಿದ್ದಾರೆ