ಬೆಂಗಳೂರು: ಬಿಟ್ ಕಾಯಿನ್ ಕರ್ಮಕಾಂಡ, 40 ಪರ್ಸೆಂಟ್ ಕಮೀಷನ್ ಆರೋಪ ಸಹಿತ ಹಲವು ಹಗರಣಗಳ ಆರೋಪಗಳ ಹೊಡೆತದಿಂದ ನಲುಗಿರುವ ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ಇದೀಗ ಕೋವಿಡ್ ನ ಹೊಸ ರೂಪಾಂತರಿ ‘ಓಮಿಕ್ರಾನ್’ ಸವಾಲು ಕೂಡ ಎದುರಾಗಿದೆ. ಈ ಸಂಕಟ ಪರಿಸ್ಥಿತಿ ಮತ್ತೊಮ್ಮೆ ಲಾಕ್‌ಡೌನ್ ಸಂದರ್ಭದ ರೀತಿ ಬಿಗಿ ಕ್ರಮಕ್ಕೆ ಕಾರಣವಾಗುತ್ತೋ ಎಂಬ ಆತಂಕ ಸಾರ್ವಜನಿರನ್ನು ಕಾಡಿದೆ.
ಇದಕ್ಕೆ ಪುಷ್ಟಿ ನೀಡುವಂತಿದೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರ ಹೇಳಿಕೆ. ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಸಂದರ್ಭದ ರೀತಿಯ ಟಫ್ ರೂಲ್ ಜಾರಿಯ ಸುಳಿವನ್ನು ಅವರು ನೀಡಿದರೇ ಎಂಬ ಚರ್ಚೆ ಸಾಮಾಜಿಕ ವಲಯದಲ್ಲಿ ಸಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಆಫ್ರಿಕಾ, ಬೋಟ್ಸ್ವಾನ, ಇಸ್ರೇಲ್, ಹಾಂಗ್ ಕಾಂಗ್ ಮೊದಲಾದ ದೇಶಗಳಲ್ಲಿ ಕಳೆದೊಂದು ವಾರದಿಂದ ಕೋವಿಡ್ ಹೊಸ ರೂಪಾಂತರಿ ವೈರಾಣು ಕಾಣಿಸಿದೆ. ಆದರೆ ರಾಜ್ಯದಲ್ಲಿ ಎಲ್ಲೂ ಇದು ಕಂಡುಬಂದಿಲ್ಲ. ಆದರೂ ನಿನ್ನೆ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ವಹಿಸಲು ಮಾರ್ಗಸೂಚಿ ರೂಪಿಸಿ ಬಿಡುಗಡೆ ಮಾಡಲಾಗಿದೆ ಎಂದರು.
ಸೋಮವಾರ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿ ಸಲಹೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ನಂತರ ಚರ್ಚೆ ನಡೆಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದವರು ತಿಳಿಸಿದರು. ಆದರೆ ಅಗತ್ಯ ಕ್ರಮ ಯಾವ ರೀತಿಯಲ್ಲಿರುತ್ತೆ ಎಂಬ ಬಗ್ಗೆ ಹೇಳಿಕೊಂಡಿಲ್ಲ. ಈ ಹೇಳಿಕೆ ಬಗ್ಗೆ ವಿಶ್ಲೇಷಿಸಿರುವ ರಾಷ್ಟ್ರೀಯ ಮಾಧ್ಯಮಗಳು ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ರೀತಿ ಬಿಗಿ ಕ್ರಮ ಜಾರಿ ಸಾಧ್ಯತೆಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.
ಕಳೆದೆರಡು ವರ್ಷದಿಂದ ಅನೇಕ ವಿಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ರಾಜ್ಯ ಸರ್ಕಾರ ಕೂಡ ಕೋವಿಡ್ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದೆ. ಆದರೆ ಬೇರೆ ದೇಶಗಳಲ್ಲಿ ಹೊಸ ವೈರಾಣು ಕಂಡುಬಂದಿರುವುದರಿಂದ ಪ್ರಧಾನಿಗಳು ಸಭೆ ನಡೆಸಲಿದ್ದಾರೆ ಎಂದವರು ಕೇಂದ್ರದಲ್ಲಿನ ಬೆಳವಣಿಗೆ ಬಗ್ಗೆಯೂ ವಿಶ್ಲೇಷಿಸಿದರು.
25 ಬಗೆಯ ರೂಪಾಂತರಿ
ಕೋವಿಡ್ ವೈರಸ್ 25 ಬಗೆಯ ರೂಪಾಂತರಿಗಳನ್ನು ಹೊಂದಿದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ. ಈಗ ಕಂಡುಬಂದಿರುವ ಹೊಸ ವೈರಾಣು ಬಗ್ಗೆಯೂ ಅಧ್ಯಯನಗಳಾಗುತ್ತಿದೆ. ಹೊಸ ವೈರಾಣುವಿನ ಮೇಲೆ ಈಗಿನ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆಯೂ ಅಧ್ಯಯನಗಳು ನಡೆಯಬೇಕಿದೆ. ಆದರೂ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕಿದೆ. ಜೊತೆಗೆ ಸುರಕ್ಷತಾ ನಿಯಮ ಪಾಲಿಸಬೇಕಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ವೈರಾಣುಗೆ ಓಮಿಕ್ರಾನ್ ಎಂಬ ಹೆಸರು ನೀಡಿದ್ದಾರೆ. ಇದು ಎಷ್ಟು ತೀವ್ರತೆ ಹೊಂದಿದೆ ಎಂಬ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ ಎಂದರು.