ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಪ್ರಾಣ ಪಣವಾಗಿಟ್ಟು ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರ ಮರೆತಿತೇ ಬಿಟ್ಟಿತೇ? ಎಂಬ ಪ್ರಶ್ನೆ ಮತ್ತೊಮ್ಮೆ ಕಾಡಿದೆ. ಕೋವಿಡ್ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಕೋವಿಡ್ ಭತ್ಯೆಯ ಫಲಾನುಭವಿಗಳ ಪಟ್ಟಿಯಿಂದ ಸರ್ಕಾರ ಮತ್ತೊಮ್ಮೆ ಕೈಬಿಟ್ಟಿದೆ. ಈ ಬಗ್ಗೆ ಬಗ್ಗೆ ಆಶಾ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆಯಡಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿಗೆ ಕೋವಿಡ್
ಭತ್ಯೆಯನ್ನು (ಕೋವಿಡ್ ರಿಸ್ಕ್ ಅಲೊವೆನ್ಸ್) ಬಿಡುಗಡೆ ಮಾಡಿರುವ ಸರ್ಕಾರ ಆಶಾ ಕಾರ್ಯಕರ್ತೆಯರನ್ನು ಮರೆತಿದೆ. ಈ ಹಿನ್ನೆಲೆಯಲ್ಲಿ ತಮಗೂಭತ್ಯೆ ಬಿಡುಗಡೆ ಮಾಡುವಂತೆ ಕೋರಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಮೂಲಕ ಆಶಾ ಕಾರ್ಯಕರ್ತೆಯರು ಬಿಬಿಎಂಪಿ ಆಯುಕ್ತರಿಗೆ ಹಾಗೂ ಸರ್ಕಾರಕ್ಕೆ ಪತ್ರ ಬರೆದಿದೆ.
ಆಯುಕ್ತರಿಗೆ ಬರೆದ ಪತ್ರ ಹೀಗಿದೆ:
ಮಾನ್ಯರೇ, ಕೋವಿಡ್ ಮಹಾಮಾರಿಯ ಎರಡನೆಯ ಅಲೆಯು ಕಳೆದ ವರ್ಷಕ್ಕಿಂತ ಭಯಾನಕವಾಗಿಯೂ ಹಾಗೂ
ಆತಂಕಕಾರಿಯಾಗಿಯೂ ಇರುವುದು ತಮಗೂ ತಿಳಿದಿರುವ ವಿಷಯ. ಕಳೆದ ವರ್ಷದ ಹಾಗೆಯೇ ಈ ವರ್ಷವೂ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿಗಳನ್ನು (ವೈದ್ಯಕೀಯರಲ್ಲದ) ತೊಡಗಿಸಿಕೊಂಡು ಅವರುಗಳಿಗೆ ಕೋವಿಡ್
ಭತ್ಯೆಯನ್ನು (ಕೋವಿಡ್ ರಿಸ್ಕ್ ಅಲೊವೆನ್ಸ್) ಬಿಡುಗಡೆ ಮಾಡಿರುವುದು ಪ್ರಶಂಸನೀಯ. ಇನ್ನೊಂದೆಡೆ ಕೊರೋನ ಸೋಂಕು ಹರಡದಂತೆ ತಡೆಯಲು ಸರ್ಕಾರ ಕಟ್ಟುನಿಟ್ಟಾಗಿ ವಿಧಿಸಿರುವ ಲಾಕ್‍ಡೌನ್‍ನಿಂದಾಗಿ ಮತ್ತು ರೋಗದ ಬಗ್ಗೆ ಸಹಜವಾಗಿಯೇ ಇರುವ ಭಯದಿಂದಾಗಿ ಜನ ಮನೆಗಳಲ್ಲೇ ಸುರಕ್ಷಿತವಾಗಿರುವ ವಿಷಮ ಸಂದರ್ಭದಲ್ಲಿ ಕಳೆದ 14-15 ತಿಂಗಳಿಂದ ಆಶಾ ಕಾರ್ಯಕರ್ತೆಯರು ತಮ್ಮ ಜೀವ ಪಣಕ್ಕಿಟ್ಟು ಕೋವಿಡ್-19 ರೋಗಾಣುವಿನ ಹರಡುವಿಕೆಯನ್ನು ತಡೆಗಟ್ಟಲು ಶ್ರಮಿಸುತ್ತಿದ್ದಾರೆ. ಇವರಲ್ಲಿ ಹಲವಾರು ಆಶಾ ಕಾರ್ಯಕರ್ತೆಯರು ಸಾವನ್ನಪ್ಪಿದ್ದಾರೆ, ಬಹಳಷ್ಟು ಕಾರ್ಯಕರ್ತೆಯರಿಗೆ ಸೋಂಕು ತಗುಲಿ ಸೋಂಕಿನ ಮಧ್ಯೆಯೂ ಜನರ ಸೇವೆಯಲ್ಲಿ ನಿರತರಾಗಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ಕೂಡ ಆರೋಗ್ಯ ಸೇವಕರೂ ಆದ, ಕೊರೋನಾ ವಾರಿಯರ್ಸಗಳೂ ಆದ ಆಶಾ ಕಾರ್ಯಕರ್ತೆಯರನ್ನು ಕೋವಿಡ್ ಭತ್ಯೆಯ ಫಲಾನುಭವಿಗಳ ಪಟ್ಟಿಯಿಂದ ಮತ್ತೊಮ್ಮೆ ಕೈ ಬಿಟ್ಟಿರುವುದು ನಮ್ಮ ಇಡೀ ಆಶಾ ಸಮುದಾಯಕ್ಕೆ ತೀವ್ರಬೇಸರ ಉಂಟು ಮಾಡುವುದರ ಜೊತೆಗೆ ಆಘಾತವೂ ಆಗಿದೆ. ಆಶಾ ಕಾರ್ಯಕರ್ತೆಯರ ಮೇಲಿನ ಈ ತಾರತಮ್ಯ ಏಕೆ ಎಂಬುದು ಅರ್ಥವಾಗದ ಪ್ರಶ್ನೆಯಾಗಿ ಉಳಿದುಬಿಟ್ಟಿದೆ.
ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗಿಲ್ಲದೇ ಕಂಟೇನ್ಮೆಂಟ್ ಜೋನ್‌ಗಳಲ್ಲಿ ಸರ್ವೆ ಕಾರ್ಯದಲ್ಲಿ ಹಗಲು, ರಾತ್ರಿ ಎನ್ನದೇ ಹಬ್ಬದ ದಿನದಂದು, ರಜೆಯ ದಿನದಂದು ಹಾಗೂ ಭಾನುವಾರಗಳನ್ನೂ ಸೇರಿ ದುಡಿಯುತ್ತಿದ್ದಾರೆ. ತೊಡಗಿದ್ದು, ಪ್ರೈಮರಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್‌ಗಳನ್ನು ಮನವೊಲಿಸಿ ಕರೆತರುವುದು, 9 ತಿಂಗಳ ಗರ್ಭಿಣಿ ಮಹಿಳೆಯರನ್ನೂ ಪರೀಕ್ಷೆಗೆ ಕರೆದುಕೊಂಡು ಹೋಗುವುದು, ಹೊರಗಿನಿಂದ ಬಂದ ವ್ಯಕ್ತಿಗಳನ್ನು ಪರೀಕ್ಷೆಗೆ ಕರೆದುಕೊಂಡು ಹೋಗುವುದು, ಕೋವಿಡ್ ಪರೀಕ್ಷೆಯನ್ನು
ನಿರ್ವಹಿಸುವುದು, ಲಸಿಕೆಯ ಕಾರ್ಯಗಳನ್ನು ನಿರ್ವಹಿಸುವುದು ಹೀಗೆ ಹತ್ತು ಹಲವಾರು ಕೆಲಸಗಳಲ್ಲಿ ತೊಡಗಿದರೂ ಇಲಾಖೆಯು
ಆಶಾ ಕಾರ್ಯಕರ್ತೆಯರನ್ನು ಕೋವಿಡ್ ಭತ್ಯೆ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳದಿರುವುದು ತೀರ ಶೋಚನೀಯ. ಕಳೆದ ಬಾರಿಯೂ ಹಲವಾರು ಆಶಾ ಕಾರ್ಯಕರ್ತೆಯರು ಕೋವಿಡ್ ಭತ್ಯೆಯಿಂದ ವಂಚಿತರಾಗಿದ್ದಾರೆ. ಬಹುಪಾಲು ಆರೋಗ್ಯ ಕೇಂದ್ರಗಳಲ್ಲಿ ಆಶಾಗಳಿಗೆ ಯಾವುದೇ ಭತ್ಯೆ ಕೊಡುವ ಮಾತುಗಳೂ ಬರುತ್ತಿಲ್ಲ. ಇದರ ಜೊತೆಗೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ವೇತನ ಇನ್ನೂ ಬಂದಿಲ್ಲ. ನಿಸ್ವಾರ್ಥತೆಯಿಂದ ಜನರ ಆರೈಕೆ ಆರೋಗ್ಯವನ್ನು ಸಂರಕ್ಷಿಸುತ್ತಿರುವ ಆಶಾಗಳನ್ನು ಭತ್ಯೆಯಿಂದ ಮತ್ತೊಮ್ಮೆ ವಂಚಿತಗೊಳಿಸಿರುವುದು ಅವರಲ್ಲಿ ತೀವ್ರ ನೋವನ್ನು ಉಂಟು ಮಾಡಿದೆ. ಹಾಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ರೂ. 5000 ಕೋವಿಡ್ ಭತ್ಯೆಯನ್ನು ಈ ಕೂಡಲೇ ಬಿಡುಗಡೆ ಮಾಡುವುದರ ಜೊತೆಗೆ ಅದನ್ನು ಕ್ರಮಬಧ್ಧಗೊಳಿಸಬೇಕೆಂದು ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಆಗ್ರಹಿಸುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಬೇಡಿಕೆಳನ್ನು ಒತ್ತಾಯಿಸುತ್ತಿದ್ದೇವೆ.
ಬೇಡಿಕೆಗಳು:
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಆಶಾ
ಕಾರ್ಯಕರ್ತೆಯರಿಗೂ ರೂ. 5000 ಕೋವಿಡ್ ಭತ್ಯೆಯನ್ನು ಈ ಕೂಡಲೇ ಬಿಡುಡೆ ಮಾಡಿ - ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಸುರಕ್ಷತಾ ಸಾಮಗ್ರಿಗಳನ್ನು ಖಾತ್ರಿ ಪಡಿಸಿ