ಚಿರತೆ ಹೆಜ್ಜೆಗುರುತಿಗೆ ಬೆಚ್ಚಿ ಬಿದ್ದ ಜನರು. ಮೇಕೆ, ಕರು, ನಾಯಿಗಳ ಮೇಲೆ ಪದೇ ಪದೇ ದಾಳಿ.. ಚಿರತೆಗಳ ಭಯದಲ್ಲಿ ಸಾಸಲು ಹೋಬಳಿಯ ಪಚ್ಚಾರಲಹಳ್ಳಿ,ಗರಿಕೇನಹಳ್ಳಿ ಗ್ರಾಮಸ್ಥರು.
ಬೆಂಗಳೂರು: ದೊಡ್ಡಬಳ್ಳಾಪುರ ತಾಲ್ಲೂಕಿನ ಅಂಚಿನಲ್ಲಿರುವ ಸಾಸಲು ಹೋಬಳಿಯ ಪಚ್ಚಾರಲಹಳ್ಳಿ ಹಾಗೂ ಗರಿಕೇನಹಳ್ಳಿ ಗ್ರಾಮದಲ್ಲಿ ಚಿರತೆಗಳ ಹೆಜ್ಜೆ ಗುರುತು ಪದೇ ಪದೇ ಪತ್ತೆಯಾಗುತ್ತಿದ್ದು ಜನ ಭಯಭೀತರಾಗಿದ್ದಾರೆ. ಕರು, ಮೇಕೆ, ನಾಯಿಗಳ ಮೇಲೆ ಚಿರತೆ ದಾಳಿ ಮಾಡಿವೆ. ಗ್ರಾಮಸ್ಥರು ಕೆಲಸ ಕಾರ್ಯಗಳಿಗೆ ಹೊಲಕ್ಕೆ ತೆರಳಲು ಭಯಭೀತರಾಗಿದ್ದು ಆತಂಕದಿಂದ ದಿನಗಳನ್ನು ಎದುರಿಸುತ್ತಿದ್ದಾರೆ.

ಚಿರತೆಗೆ ಏಳು ನಾಯಿ, ಒಂದು ಕರು ಬಲಿ.
ಕಳೆದ ವಾರದಿಂದ ನಾಯಿಗಳ ಮೇಲೆ ಚಿರತೆ ದಾಳಿ ನಡೆಸಿ ಏಳು ನಾಯಿಗಳನ್ನು ತಿಂದುಹಾಕಿದೆ. ಶನಿವಾರ ರಾತ್ರಿ ಪಚ್ಚಾರಲಹಳ್ಳಿತ ಮುತ್ತುರಾಯಪ್ಪ ಎಂಬುವರ ಕರುವಿನ ಹಿಂಭಾಗಕ್ಕೆ ಬಾಯಿ ಹಾಕಿದೆ. ಪರಿಣಾಮ ತೀವ್ರ ರಕ್ತಸಾವ್ರವಾಗಿ ಕರು ಸಾವನ್ನಪ್ಪಿದೆ. ಇದರಿಂದ ತೋಟದಲ್ಲಿ ವಾಸ ಮಾಡುವ ಕುಟುಂಬಗಳು ಸೇರಿದಂತೆ ಗ್ರಾಮಸ್ಥರಲ್ಲಿ ಭೀತಿ ಹೆಚ್ಚಿಸಿದೆ. ಚಿರತೆ ತೋಟದಲ್ಲಿ ನಡೆದಾಡಿದ ಹೆಜ್ಜೆಗಳು ಮೂಡಿದ್ದು, ಕೂಲಿಕಾರರು ಕೃಷಿ ಚಟುವಟಿಕೆ ಕೈಗೊಳ್ಳಲು ಹಿಂಜರಿಯುವಂತಾಗಿದೆ.
ಚಿರತೆ ಭಯದಿಂದ ಸುತ್ತಮುತ್ತಲಿನ ಹತ್ತಾರು ಹೊಲಗಳ ರೈತರು ಒಟ್ಟಿಗೆ ಹೊಲದತ್ತ ಮುಖಮಾಡುತ್ತಿದ್ದಾರೆ. ಒಬ್ಬಿಬ್ಬರು ಜಮೀನಿನ ಕಡೆಗೆ ಹೋಗಲು ಜೀವಭಯದಿಂದ ಹಿಂದೇಟು ಹಾಕುತ್ತಿದ್ದಾರೆ.

ಪಚ್ಚಾರಲಹಳ್ಳಿ, ಗರಿಕೇನಹಳ್ಳಿ ಗ್ರಾಮದ ರೈತ ಮುತ್ತುರಾಯಪ್ಪನ ತೋಟದ ಜಮೀನು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹೆಜ್ಜೆಗುರುತು ಪತ್ತೆಹಚ್ಚಿದೆ. ಹಾಗಾಗಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿರುವ ಚಿರತೆ ಸೇರೆಗೆ ಆಯಕಟ್ಟಿನ ಸ್ಥಳದಲ್ಲಿ ಬೋನು ಅಳವಡಿಸಿ ಸೆರೆ ಹಿಡಿಯಲು ಸನ್ನದ್ಧವಾಗಿದೆ.







































































