ಬೆಂಗಳೂರು: ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕನ್ನಡಿಗರಿಗೆ ಮೀಸಲಾತಿ ಸಿಗದಿರುವ ಬಗ್ಗೆ ವಕೀಲರ ಸಮೂಹ ಆಕ್ರೋಶ ವ್ಯಕ್ತಪಡಿಸಿದೆ. “ಕರ್ನಾಟಕದ ವಿದ್ಯಾರ್ಥಿಗಳ ವಿಶೇಷ ಮೀಸಲಾತಿಯನ್ನು ಪಾಲಿಸದ ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆ” ವಿರುದ್ದ ವಕೀಲರು ಹೋರಾಟಕ್ಕೆ ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯವನ್ನು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಸುಪ್ರೀಂಕೋರ್ಟ್ ಹಿರಿಯ ವಕೀಲ ಮತ್ತು ನಮ್ಮ ರಾಜ್ಯದ ರಾಜ್ಯಸಭಾ ಸದಸ್ಯರಾಗಿದ್ದ ಶ್ರೀ.ರಾಂ ಜೇಠ್ಮಲಾನಿ ಹಾಗೂ ಅಂದಿನ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರ ಜಂಟಿ ಪ್ರಯತ್ನದಿಂದ 1988 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯ್ತು. ದೇಶದ ಮೊಟ್ಟ ಮೊದಲ ಕಾನೂನು ವಿಶ್ವವಿದ್ಯಾಲಯವಿದು. ಹಾರ್ವರ್ಡ್ ಕಾನೂನು ಮಹಾವಿದ್ಯಾಲಯದ ಗುಣಮಟ್ಟಕ್ಕೆ ಸರಿಸಾಟಿಯಾಗುವಂತೆ ವಿಶ್ವವಿದ್ಯಾಲಯವನ್ನು ನಿರ್ವಹಿಸಲಾಗುತ್ತಿದೆ. ಸದರಿ ಕಾನೂನು ಶಾಲೆಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಕುಲಾಧಿಪತಿ ಗಳಾಗಿರುತ್ತಾರೆ. ಸಂಪೂರ್ಣ ಸ್ವಾಯತ್ತತೆ ಹೊಂದಿರುವ ಈ ಕಾನೂನು ಶಾಲೆಯು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಸುಮಾರು 23 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಆಡಳಿತದಲ್ಲಿ ರಾಜ್ಯಪಾಲರು, ಸರ್ಕಾರಗಳು ಮಧ್ಯೆ ಪ್ರವೇಶಿಸುವಂತಿಲ್ಲ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಹೇಳಿದ್ದಾರೆ.
ಈ ಕುರಿತಂತೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಬೆಂಗಳೂರು ರಾಷ್ಟ್ರೀಯ ಮಾದರಿಯಲ್ಲಿ ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ಕಾನೂನು ಶಾಲೆಗಳನ್ನು ಆರಂಭಿಸಲಾಗಿದೆಯಾದರೂ ಬೆಂಗಳೂರಿನ ಕಾನೂನು ಶಾಲೆ ಪ್ರಥಮ ಸ್ಥಾನವನ್ನು ಕಾಪಾಡಿಕೊಂಡಿದೆ ಎಂದಿದ್ದಾರೆ.
ಆಯಾ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿರುವ ಕಾನೂನು ಶಾಲೆಗಳಲ್ಲಿ ತಮ್ಮ ರಾಜ್ಯದ ವಿದ್ಯಾರ್ಥಿಗಳ ಹಿತವನ್ನು ಕಾಪಾಡುವ ದೃಷ್ಟಿಯಿಂದ ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25% ಮೀಸಲಾತಿಯನ್ನು ಕಾನೂನು ತಿದ್ದುಪಡಿಯ ಮೂಲಕ ವಿಸ್ತರಿಸಿದ್ದಾರೆ ಮತ್ತು ಸದರೀ ಕಾನೂನನ್ನು ಅಲ್ಲಿನ ರಾಷ್ಟ್ರೀಯ ಕಾನೂನು ಶಾಲೆಗಳ ಆಡಳಿತ ಮಂಡಳಿಗಳು ಸ್ಪಷ್ಟವಾಗಿ ಪಾಲನೆ ಮಾಡುತ್ತಿವೆ. ನಮ್ಮ ರಾಜ್ಯದಲ್ಲಿಯೂ ಸಹ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25% ಮೀಸಲಾತಿಯನ್ನು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಮೀಸಲಾತಿ ಸೌಲಭ್ಯವನ್ನು ಕಾನೂನು ತಿದ್ದುಪಡಿ ಮೂಲಕ ಜಾರಿ ಮಾಡಿತು. ಸದರೀ ತಿದ್ದುಪಡಿಯನ್ನು ಉತ್ತರ ಭಾರತದ ವಿದ್ಯಾರ್ಥಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದರೂ ಪ್ರಯೋಜನವಾಗಲಿಲ್ಲ ಎಂದು ರಂಗನಾಥ್ ಗಮನಸೆಳೆದಿದ್ದಾರೆ.
ಇತ್ತೀಚಿನ ಸುದ್ದಿಯ ಪ್ರಕಾರ, ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯವು ಕನ್ನಡದ ವಿದ್ಯಾರ್ಥಿಗಳಿಗೆ ಶೇ.25% ವಿಶೇಷ ಮೀಸಲಾತಿಯನ್ನು ಪಾಲನೆ ಮಾಡುತ್ತಿಲ್ಲವೆಂಬುದು ಆಘಾತಕಾರಿ ಸಂಗತಿಯಾಗಿದೆ. ಸದರೀ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯಕ್ಕೆಉಪ ಕುಲಪತಿಯಾಗಿರುವವರು ಸಂವಿಧಾನ ವಿಷಯದಲ್ಲಿ ಪರಿಣಿತರಾಗಿರುವ ಇದೇ ಕಾನೂನು ಶಾಲೆಯ ಹಿರಿಯ ವಿದ್ಯಾರ್ಥಿ, ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದು ವ್ಯಾಸಾಂಗ ಮಾಡಿರುವ ಕನ್ನಡಿಗರೇ ಆದ ಪ್ರೊ.ಸುಧೀರ್ ಕೃಷ್ಣಮೂರ್ತಿಯವರು !
ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯ ಉಪಕುಲಪತಿ ಸ್ಥಾನವನ್ನು ಅಲಂಕರಿಸಿರುವ ಪ್ರೊ.ಸುಧೀರ್ ಕೃಷ್ಣಮೂರ್ತಿಯವರು ” ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ” ಎಂಬ ವಿಷಯದ ಕುರಿತು ಡಾಕ್ಟೋರೇಟ್ ಪದವಿ ಗಳಿಸಿದವರು. ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25% ವಿಶೇಷ ಮೀಸಲಾತಿಯನ್ನು ಸಂವಿಧಾನ ರೀತ್ಯಾ ಆಯ್ಕೆಯಾಗಿರುವ ಸರ್ಕಾರದ ಕಾನೂನು ಬದ್ಧವಾಗಿಯೇ ತಿದ್ದುಪಡಿ ಮಾಡಿದ್ದು, ನ್ಯಾಯಾಲಯವೂ ಕೂಡಾ ಸರ್ಕಾರದ ನಡೆಯನ್ನು ಬೆಂಬಲಿಸಿರುವಾಗ,ಉಪ ಕುಲಪತಿ ಪ್ರೊ.ಸುಧೀರ್ ಕೃಷ್ಣಮೂರ್ತಿಯವರು ತಮ್ಮ ಸರ್ವಾಧಿಕಾರಿ ಧೋರಣೆಯಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ನಾಯಬದ್ಧವಾಗಿ ಸಲ್ಲಬೇಕಾಗಿರುವ ಅವಕಾಶವನ್ನು ನೀಡದೆ ವಂಚಿಸುತ್ತಿರುವುದು ಖಂಡನೀಯ ಎಂದವರು ಹೇಳಿದರು.
ಈ ಕುರಿತು ರಾಜ್ಯದ ಕಾನೂನು ಮತ್ತು ಸಂಸದೀಯ ಖಾತೆ ಸಚಿವರಾದ ಶ್ರೀ ಮಾಧು ಸ್ವಾಮಿಯವರು, ಪ್ರೊ.ಸುಧೀರ್ ಕೃಷ್ಣ ಮೂರ್ತಿಯವರಿಗೆ ವಿಷಾದದಿಂದ ಪಾತ್ರ ಬರೆದಿರುವುದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಸರ್ಕಾರ ಈ ವಿಚಾರವನ್ನು ಇಲ್ಲಿಗೆ ಮುಕ್ತಾಯಗೊಳಿಸಬಾರದು, ಸರ್ಕಾರದ ಕಾನೂನನ್ನು ಉದ್ದೇಶ ಪೂರ್ವಕವಾಗಿ ಜಾರಿಗೊಳಿಸಿದೆ ಕನ್ನಡಿಗರಿಗೆ ದ್ರೋಹ ಎಸಗುತ್ತಿರುವ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಡುತ್ತಿರುವ ಸಂವಿಧಾನ ತಜ್ಞ ಪ್ರೊ.ಸುಧೀರ್ ಕೃಷ್ಣ ಮೂರ್ತಿಯವರನ್ನು ಸದನಕ್ಕೆ ಕರೆಸಿ ವಾಗ್ದಂಡನೆಯನ್ನು ವಿಧಿಸಬೇಕೆಂಬುದು ವಕೀಲರ ವೃಂದ ಮತ್ತು ಸಮಸ್ತ ಕನ್ನಡಿಗರ ಪರವಾಗಿ ಆಗ್ರಹಿಸುತ್ತಿದ್ದೇನೆ. ಎರಡು ವರ್ಷಗಳಿಂದ ಕಸಿಯಲಾಗಿರುವ ಶೇ.25% ವಿದ್ಯಾರ್ಥಿಗಳ ಅವಕಾಶವನ್ನು ಸೇರಿಸಿ 2023-2024 ನೇ ಸಾಲಿನ ಪ್ರವೇಶದಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ ಕೊಡಲೇಬೇಕೆಂದೂ ಆಗ್ರಹಿಸುತ್ತಿದ್ದೇನೆ. ತಪ್ಪಿದ್ದಲ್ಲಿ ವಕೀಲರ ವೃಂದ,ಕನ್ನಡ ಪರ ಸಂಘಟನೆಗಳು ಮತ್ತು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟಗಳೊಂದಿಗೆ ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಹಿರಿಯ ವಕೀಲರ ಸಲಹೆ ಮತ್ತು ಮಾರ್ಗದರ್ಶನದಲ್ಲಿ, ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯ ತಾರತಮ್ಯ ನೀತಿಯ ವಿರುದ್ಧ ಹೋರಾಟವನ್ನು ರಾಷ್ಟ್ರೀಯ ಕಾನೂನು ಶಾಲೆಯ ಕ್ಯಾಂಪಸ್ ಮತ್ತು ಹಾಲಿ ಉಪ ಕುಲಪತಿ ಪ್ರೊ.ಸುಧೀರ್ ಕೃಷ್ಣ ಮೂರ್ತಿಯವರ ನಿವಾಸ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ನಿವಾಸದ ಮುಂದೆ ಹಮ್ಮಿಕೊಳ್ಳಲಿದ್ದೇವೆ ಎಂದು ಎ.ಪಿ.ರಂಗನಾಥ್ ತಿಳಿಸಿದ್ದಾರೆ.
ಉನ್ನತ ಶಿಕ್ಷಣದಲ್ಲಿ ಕನ್ನಡದ ವಿದ್ಯಾರ್ಥಿಗಳನ್ನು ದೂರವಿಡುವ, ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಕರ್ನಾಟಕದ ಪ್ರತಿಭಾವಂತ,ದಲಿತ,ಹಿಂದುಳಿದ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಕನ್ನಡಿಗರ ಅವಕಾಶಗಳನ್ನು ಕಸಿದುಕೊಂಡು ಹಿಂದಿವಾಲಾಗಳಿಗೆ ಹೆಚ್ಚು ಅವಕಾಶ ಕಲ್ಪಿಸುವ ಕೇಂದ್ರ ಸರ್ಕಾರದ ಗುಪ್ತ ಅಜೆಂಡಾಗಳನ್ನು ಜಾರಿಗೊಳಿಸಲು ಕನ್ನಡಿಗರೇ ನೆರವಾಗುತ್ತಿರುವುದು ಅತ್ಯಂತ ದುರಂತ ಮತ್ತು ಖಂಡನೀಯ ಎಂದಿರುವ ಅವರು, ನೆರೆಯ ರಾಜ್ಯಗಳಲ್ಲಿನ ರಾಷ್ಟ್ರೀಯ ಕಾನೂನು ಶಾಲೆಗಳಲ್ಲಿ, ಸ್ಥಳೀಯ ಅಭ್ಯರ್ಥಿಗಳ ವಿಶೇಷ ಮೀಸಲಾತಿಯನ್ನು ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ನಮ್ಮ ರಾಜ್ಯದಲ್ಲಿ ಆಳುವವರ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ಪ್ರೊ.ಸುಧೀರ್ ಕೃಷ್ಣಮೂರ್ತಿಯವರು ಪ್ರವೇಶಾತಿಯಲ್ಲಿ ಕನ್ನಡಿಗರ ಪಾಲನ್ನು ಹಿಂದೀ ಶಾಲೆಗಳಿಗೆ ಬೆಳ್ಳಿ ತಟ್ಟೆಯಲ್ಲಿಟ್ಟು ಕೊಡುತ್ತಿದ್ದಾರೆ ಎಂದಿದ್ದಾರೆ. ಸರ್ಕಾರ ತಕ್ಷಣವೇ ಕನ್ನಡ ವಿದ್ಯಾರ್ಥಿಗಳಿಗೆ ನ್ಯಾಯವನ್ನು ದೊರಕಿಸಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.