ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯಲ್ಲಿ 8 ವರ್ಷಗಳ ಬಳಿಕ ನೇಮಕಾತಿ ನಡೆದಿದ್ದು, 2000 ಚಾಲಕ-ಕಂ- ನಿರ್ವಾಹಕ ಅಭ್ಯರ್ಥಿಗಳಿಗೆ ನಿಯೋಜನಾ ಆದೇಶ ಪತ್ರವನ್ನ ಮಂಗಳವಾರ ವಿತರಿಸಲಾಯಿತು.
KSRTC ಕೇಂದ್ರ ಕಛೇರಿಯಲ್ಲಿ ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ (ವಾಸು), ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್ ಉಪಸ್ಥಿತಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಾಂಕೇತಿಕವಾಗಿ 51 ಚಾಲಕ ಕಂ ನಿರ್ವಾಹಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಚಾಲನಾ ಸಿಬ್ಬಂದಿಯ ನೇಮಕಾತಿಯು ಯಾವುದೇ ಹಸ್ತಕ್ಷೇಪವಿಲ್ಲದೆ ಪಾರದರ್ಶಕವಾಗಿ ನಡೆದಿದ್ದು, ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆಗೊಳಿಸಲಾಗಿದೆ ಎಂದು ತಿಳಿಸಿದರು.

ನಿಗಮವು ಕರೋನಾ ನಂತರ ಹಲವು ಅಡತಡೆಗಳನ್ನು ಎದುರಿಸಿಕೊಂಡು ಆರ್ಥಿಕವಾಗಿ ಯಶಸ್ಸಿನ ಮಾರ್ಗವನ್ನು ನೋಡುತ್ತಿದ್ದು, ಹಲವಾರು ಕಾರ್ಮಿಕ ಸ್ನೇಹಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿರುತ್ತದೆ. ನೌಕರರು ಹಾಗೂ ಅವರ ಅವಲಂಭಿತರಿಗೆ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸಲಾಗಿದೆ ಎಂದವರು ತಿಳಿಸಿದರು.
ನಾಲ್ಕು ಸಾರಿಗೆ ನಿಗಮಗಳಿಂದ ಸುಮಾರು 1000 ಕ್ಕೂ ಹೆಚ್ಚು ಮೃತರ ಅವಲಂಭಿತರಿಗೆ ನೌಕರಿಯನ್ನು ನೀಡಿದ್ದು, ಸುಮಾರು 9000 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಈಗಾಗಲೇ 7500 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಂಡಿದೆ. ಅಪಘಾತದಿಂದ ಮೃತಪಟ್ಟ ಚಾಲನಾ ಸಿಬ್ಬಂದಿಯ ಕುಟುಂಬವನ್ನು ಆರ್ಥಿಕವಾಗಿ ಸಧೃಡಗೊಳಿಸುವ ಸಲುವಾಗಿ ರೂ.1 ಕೋಟಿ ವಿಮಾ ಯೋಜನೆ, ಸ್ವಾಭಾವಿಕವಾಗಿ ಮೃತಪಟ್ಟ ಚಾಲನಾ ಸಿಬ್ಬಂದಿಗಳ ಕುಟುಂಬಕ್ಕೆ ರೂ.10 ಲಕ್ಷಗಳ ಕಟುಂಬ ಕಲ್ಯಾಣ ಯೋಜನೆ ಅಡಿ ಪರಿಹಾರವನ್ನು ನೀಡಲಾಗುತ್ತಿದೆ ಎಂದು ಸಚಿವರುತಿಳಿಸಿದರು.
ಅಧ್ಯಕ್ಷರು ಮಾತನಾಡಿ, ಕಳೆದ 08 ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಯು ಸ್ಥಗಿತಗೊಂಡಿದ್ದು, ಸಾರಿಗೆ ಸಚಿವರು ಸರ್ಕಾರದೊಂದಿಗೆ ಚರ್ಚಿಸಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿರುತ್ತಾರೆ. ಚಾಲನಾ ಸಿಬ್ಬಂದಿಗಳ ನೇಮಕಾತಿಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದ್ದು, ನಿಮ್ಮ ಆಯ್ಕೆಯಂತೆ ಘಟಕ ನಿಯೋಜನೆ ಮಾಡಿರುವುದಾಗಿ ತಿಳಿಸಿದರು.




























































