KSRTC; ಅಂತರ ನಿಗಮ ವರ್ಗಾವಣೆ ಪಟ್ಟಿ ಪ್ರಕಟವಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ಲಿಖಿತವಾಗಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರ 2023ನೇ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ 05.07.2023ರ ಬೆಳಿಗ್ಗೆ 11:00 ಗಂಟೆಯಿಂದ ಪ್ರಾರಂಭವಾಗಿದ್ದು, 31.12.2023 ರ ಸಂಜೆ 5:30 ರವರೆಗೆ ಆನ್-ಲೈನ್ ಮೂಲಕ www.ksrtc.org/transfer ರಲ್ಲಿ ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), BMTC, KKRTC, NWKRTC ಸಂಸ್ಥೆಗಳ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ರ ನೌಕರರಿಗೆ ಅಂತರ ನಿಗಮ ಪರಸ್ಪರ 958 ನೌಕರರು ಅರ್ಜಿ ಸಲ್ಲಿಸಿದ್ದು, ಈ ಪೈಕಿ 616 ನೌಕರರು ಅವರ ಕೋರಿಕೆ ಮೇರೆಗೆ ಅಂತರ ನಿಗಮ ಪರಸ್ಪರ ವರ್ಗಾವಣೆಗೊಂಡಿರುತ್ತಾರೆ. ಸದರಿ ಪರಸ್ಪರ ವರ್ಗಾವಣೆ ಆದೇಶವನ್ನು ksrtc.karnataka.gov.in ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಈ ಆದೇಶಕ್ಕೆ 06.07.2024 ರಿಂದ 10.07.2024ರ ಸಂಜೆ 5.30 ರವರೆಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ನೌಕರರಿಗೆ ಅವಕಾಶವನ್ನು ನೀಡಲಾಗಿದೆ. ನೌಕರರು ಆಕ್ಷೇಪಣೆಗಳನ್ನು ಕಡ್ಡಾಯವಾಗಿ ಸಂಬಂಧಪಟ್ಟ ವಿಭಾಗದ ಆಡಳಿತಾಧಿಕಾರಿಗಳಿಗೆ ಸಲ್ಲಿಸಿ ಸ್ವೀಕೃತಿ ಪಡೆಯತಕ್ಕದ್ದು. ನೌಕರರು ವೈಯಕ್ತಿಕವಾಗಿ ಅಥವಾ ಅಂಚೆಯ ಮೂಲಕ ಕೇಂದ್ರ ಕಛೇರಿಗೆ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನಿಗಮದ ನಿರ್ದೇಶಕರು (ಸಿಬ್ಬಂದಿ : ಜಾಗೃತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.