ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮೇಲೆ ನಿರ್ಬಂಧ ಹೇರಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಪರೋಕ್ಷವಾಗಿ ಕನ್ನಡಿಗರ ಮೇಲೆ ಸವಾರಿ ಮಾಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ ಹೊರ ಹಾಕಿದೆ.
ರಾಜ್ಯ ಸರ್ಕಾರದ ನಡೆ ಬಗ್ಗೆ ಅಸಮಾಧಾನ ಹೊರ ಹಾಕಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಸಾರ್ವಜನಿಕ ಸ್ಥಳಗಳಲ್ಲಿ ಸಂಘ ಸಂಸ್ಥೆಗಳ ಕಾರ್ಯಕ್ರಮಗಳನ್ನು ನಿರ್ಬಂಧಿಸುವ ಕ್ರಮ ಸರಿಯಲ್ಲ ಎಂದರು.
ರಾಜ್ಯ ಸರ್ಕಾರದ ಕ್ರಮವು ಕೇವಲ RSS ನ್ನು ಕೇಂದ್ರೀಕೃತವಾಗಿಲ್ಲ, ಈ ಆದೇಶದಿಂದ RSS ಮೇಲೆ ಕಿಂಚಿತ್ತೂ ಪರಿಣಾಮ ಬೀರುವುದಿಲ್ಲ, ಬದಲಾಗಿ ಕನ್ನಡ ಸಂಘಟನೆಗಳ ಮೇಲೆ ಹಾಗೂ ಕನ್ನಡ ಕಾರ್ಯಕರ್ತರ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರವೀಣ್ ಕುಮಾರ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಕನ್ನಡ ನಾಡು ನುಡಿಗೆ ಧಕ್ಕೆಯಾದಲ್ಲಿ ನಾಡಿಗಾಗಿ ಹೋರಾಟ ನಡೆಸುವಲ್ಲಿ ಕನ್ನಡ ಪರ ಸಂಘಟನೆಗಳು ಮುಂಚೂಣಿಯಲ್ಲಿರುತ್ತವೆ. ಹೀಗಿರುವಾಗ ಸರ್ಕಾರವು ಕನ್ನಡ ಪರ ಸಂಘಟನೆಗಳ ಹಾಗೂ ಕನ್ನಡ ನಾಡು-ನುಡಿ ಹಿತಕ್ಕೆ ದುಡಿಯುವವರ ಬಗ್ಗೆ ಯೋಚನೆ ಮಾಡಬೇಕಿತ್ತು ಎಂದು ಪ್ರವೀಣ್ ಕುಮಾರ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಸರ್ಕಾರದ ಆದೇಶವು ಕೇವಲ RSS ಗೆ ಸಂಬಂಧಿಸಿದ್ದರೆ ನಾವು ಪ್ರಶ್ನೆ ಮಾಡುತ್ತಿರಲಿಲ್ಲ. ಬದಲಾಗಿ RSS ಸಂಘಟನೆಯನ್ನು ನಿರ್ಬಂಧಿಸುವ ನೆಪದಲ್ಲಿ ಕನ್ನಡ ನಾಡು ನುಡಿಗಾಗಿ ಹೋರಾಟ ನಡೆಸುತ್ತಿರುವ ಕನ್ನಡ ಪರ ಸಂಘಟನೆಗಳನ್ನು ಹಾಗೂ ಕನ್ನಡಿಗರನ್ನು ಸಿದ್ದರಾಮಯ್ಯ ಸರ್ಕಾರ ಗುರಿಯಾಗಿದೆ ಎಂದವರು ಆರೋಪಿಸಿದರು.
ಕನ್ನಡ ಕಹಳೆಗೆ ಸರ್ಕಾರದ ಅಡ್ಡಿ:
ಕರುನಾಡಿನ ನೆಲದಲ್ಲಿ ನಿತ್ಯವೂ ಕನ್ನಡ ಕಹಳೆ ಮೊಳಗಬೇಕು, ಗಲ್ಲಿ ಗಲ್ಲಿಗಳಲ್ಲಿ ಕನ್ನಡ ಧ್ವಜ ಹಾರಬೇಕು. ಆದರೆ ಸಿದ್ದರಾಮಯ್ಯ ಸರ್ಕಾರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಡವಿರೋಧಿ ಎಂಬಂತೆ ವರ್ತಿಸುತ್ತಿದೆ ಎಂದು ಕನ್ನಡ ಪರ ಸಂಘಟನೆಯ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
RSS ಸಂಘಟನೆಯ ಚಟುವಟಿಕೆಗಳಿಗೆ ಕರ್ನಾಟಕದಲ್ಲಿ ಅಂಕುಶ ಹಾಕಿದರೆ ಆ ಸಂಘಟನೆ ಪಕ್ಕದ ರಾಜ್ಯದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಮೋದಿಯನ್ನು ಕರೆಸಿ ಭಾರೀ ಪ್ರಚಾರ ಮೂಲಕ ರಾಷ್ಟ್ರವ್ಯಾಪಿ ಸುದ್ದಿ ಮಾಡಿ ಗುರಿ ಸಾಧಿಸುತ್ತಾರೆ. ಆದರೆ, ಕನ್ನಡ ಸಂಘಟನೆಗಳು ಪರ ರಾಜ್ಯದ ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮ ನಡೆಸಲು ಆಗುತ್ತಾ? ಎಂದು ಅವರು ಪ್ರಶ್ನಿಸಿದ್ದಾರೆ.
ಕನ್ನಡಿಗರಿಗೆ ಇರುವುದೊಂದೇ ಕರುನಾಡು..!
ಕನ್ನಡಿಗರಿಗೆ ಇರು ವುದೊಂದೇ ಕರುನಾಡು ಎಂದಿರುವ ಕರವೇ ಮುಖಂಡರು, ಸರ್ಕಾರ ತನ್ನ ಕನ್ನಡ ವಿರೋಧಿ ನಿಲುವನ್ನು ನಿಲ್ಲಿಸಬೇಕು, ಕನ್ನಡಿಗರ ಅಸ್ಮಿತೆಗೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.